ADVERTISEMENT

ರಾಷ್ಟ್ರಪತಿ ಭಾಷಣ: 2047ಕ್ಕೆ ಆಧುನಿಕ ಭಾರತ ನಿರ್ಮಿಸಲು ಶಕ್ತಿಮೀರಿ ಶ್ರಮಿಸಲು ಕರೆ

ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ | ಅಭಿವೃದ್ಧಿ ಗುರಿಯತ್ತ ಹೆಜ್ಜೆ, ದೇಶದ ‘ಸಮಷ್ಟಿ ಸಾಧನೆ’

ಪಿಟಿಐ
Published 31 ಜನವರಿ 2022, 14:04 IST
Last Updated 31 ಜನವರಿ 2022, 14:04 IST
ಬಜೆಟ್‌ ಅಧಿವೇಶನ ಸೋಮವಾರ ಆರಂಭವಾಗಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಂಸತ್ತಿಗೆ ಬಂದರು. ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಇದ್ದರು   -ಪಿಟಿಐ ಚಿತ್ರ
ಬಜೆಟ್‌ ಅಧಿವೇಶನ ಸೋಮವಾರ ಆರಂಭವಾಗಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಂಸತ್ತಿಗೆ ಬಂದರು. ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಇದ್ದರು   -ಪಿಟಿಐ ಚಿತ್ರ   

ನವದೆಹಲಿ: ದಾಖಲೆಯ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ಖರೀದಿ, ದೇಶದ ಆಂತರಿಕ ಭದ್ರತೆಗೆ ಕ್ರಮ, ಕೋವಿಡ್‌ನ ಪರಿಣಾಮಕಾರಿ ನಿರ್ವಹಣೆ ಸೇರಿ ಹಲವು ‘ಸಾಧನೆ’ಗಳನ್ನು ಪಟ್ಟಿಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಅಭಿವೃದ್ಧಿ ಗುರಿ ಸಾಧನೆ ಹಾದಿಯಲ್ಲಿ ಈ ಎಲ್ಲವು ‘ಸಮಷ್ಟಿ ಸಾಧನೆಗಳು’ ಎಂದೂ ಶ್ಲಾಘಿಸಿದರು.

ಸೋಮವಾರ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿ, ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ 50 ನಿಮಿಷದ ಭಾಷಣದಲ್ಲಿ ಅವರು, ಉತ್ತರ ಪ್ರದೇಶ ಸೇರಿದಂತೆ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶೇಷವಾಗಿ ಉಲ್ಲೇಖಿಸಿದರು.

ಸಾಧನೆಗಳ ಉಲ್ಲೇಖದ ಹಿಂದೆಯೇ ಈ ಎಲ್ಲ ಸಾಧನೆಗಳ ಶ್ರೇಯ ಒಂದು ಸಂಸ್ಥೆ, ವ್ಯವಸ್ಥೆಯದಲ್ಲ; ಬದಲಿಗೆ ಇವು ಸಮಷ್ಟಿ ಸಾಧನೆ. ಇದರಲ್ಲಿ ದೇಶದ ಎಲ್ಲ ನಾಗರಿಕರು ಭಾಗಿಯಾಗಿದ್ದಾರೆ ಎಂದರು. ಭವ್ಯ, ಆಧುನಿಕ ಮತ್ತು ಅಭಿವೃದ್ಧಿ ಭಾರತವನ್ನು 2047ರ ವೇಳೆಗೆ ನಿರ್ಮಿಸಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದು ಕರೆ ನೀಡಿದರು.

ADVERTISEMENT

ಇದರಲ್ಲಿ ನಮ್ಮೆಲ್ಲರ ಪಾಲೂ ಇದೆ. ಈ ಪ್ರಯಾಣದಲ್ಲಿ ನಮ್ಮಗಳದು ಸಮಾನ ಪಾಲು ಎಂದರು. ಸಂಸದರನ್ನು ಉದ್ದೇಶಿಸಿ ನೀವುಗಳು ದೇಶದ ಕೋಟ್ಯಂತರ ಜನರ ಭರವಸೆಗಳ ಚುಕ್ಕಾಣಿ. ಭವಿಷ್ಯದಲ್ಲಿಯೂ ಉತ್ಸಾಹದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಗೋವಾ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ, ಆಫ್ಗಾನಿಸ್ತಾನದಿಂದ ಗುರುಗ್ರಂಥ ಸಾಹೀಬ್‌ ಅವರ ಎರಡು ವಿಶೇಷ ವಸ್ತುಗಳನ್ನು ಮರಳಿ ತಂದುದು, ಕೃಷಿಕರ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಷ್ಟ್ರಪತಿ ಕೋವಿಂದ್ ಅವರು ವಿಶೇಷವಾಗಿ ಉಲ್ಲೇಖಿಸಿದರು.

ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ರಕ್ಷಣಾ ಪರಿಕರಗಳ ಆಧುನೀಕರಣಕ್ಕೆ ನೀಡಲಾದ ಶೇ 87ರಷ್ಟು ಅನುಮೋದನೆಗಳು ಸ್ವಾವಲಂಬನೆಗೆ ಒತ್ತು ನೀಡಿವೆ. ಮೇಕ್‌ ಇನ್‌ ಇಂಡಿಯಾ ವರ್ಗದ್ದಾಗಿದೆ ಎಂದು ಹೇಳಿದರು.

ಕೋವಿಡ್ ಪರಿಸ್ಥಿತಿ ನಿರ್ವಹಣೆಯನ್ನು ಉಲ್ಲೇಖಿಸಿ ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗು, ಉದ್ಯಮಿಗಳ ಸೇವೆ ಶ್ಲಾಘನೀಯ. ಇದರ ಪರಿಣಾಮ ಒಂದೇ ವರ್ಷದಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಲಾಯಿತು ಎಂದರು.

ಕೋವಿಡ್ ಅವಧಿಯಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯಡಿ, 19 ತಿಂಗಳು 80 ಕೋಟಿ ಫಲಾನುಭವಿಗಳಿಗೆ ಪಡಿತರ ವಿತರಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರಪತಿಗಳು ಹೇಳಿದ್ದು..

* ಮೂಲಸೌಕರ್ಯ ಅಭಿವೃದ್ಧಿಗೆ ವಿವಿಧ ಸಚಿವಾಲಯಗಳ ನಡುವೆ ಹೊಂದಾಣಿಕೆಗೆ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾಯೋಜನೆ ರೂಪಿಸಲಾಗಿದೆ.

* ಭವಿಷ್ಯದಲ್ಲಿ ರೈಲ್ವೆ, ಹೆದ್ದಾರಿ, ವಿಮಾನಯಾನ ಸೇವೆಯು ಪ್ರತ್ಯೇಕ ಸೌಲಭ್ಯವಾಗಿರದೆ, ದೇಶದ ಆಂತರಿಕ ಸಂಪನ್ಮೂಲದ ಭಾಗವೇ ಆಗಿರಲಿದೆ.

* ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಶೀಘ್ರ ಮುಕ್ತಾಯ. 21 ನೂತನ ವಿಮಾನನಿಲ್ದಾಣಗಳ ಅಭಿವೃದ್ಧಿಗೆ ಕ್ರಮ, 8 ರಾಜ್ಯಗಳಲ್ಲಿ 11 ಹೊಸ ಮೆಟ್ರೊ ರೈಲು ಸೇವೆಗೆ ಒಪ್ಪಿಗೆ, 7 ವರ್ಷದಲ್ಲಿ 24 ಸಾವಿರ ಕಿ.ಮೀ.ರೈಲ್ವೆ ಮಾರ್ಗದ ವಿದ್ಯುದೀಕರಣ.

* ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಕಿಸಾನ್‌ ರೈಲ್‌ ಸೇವೆಗೆ ಚಾಲನೆ, ದೇಶದ ವಿವಿಧ ಭಾಗಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಿರುವುದು ಈ ಕ್ಷೇತ್ರದ ಪ್ರಮುಖ ಸಾಧನೆ.

* ಹಿಂದೆ ‘ನಿರ್ಲಕ್ಷ್ಯ‘ಕ್ಕೆ ಒಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಗೆ ಒತ್ತು. ಪರಿಣಾಮ, ಅಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚುತ್ತಿವೆ.

* ತಾಪಮಾನ ಬದಲಾವಣೆ ಕುರಿತು ಭಾರತ ಈಗ ಜಾಗತಿಕವಾಗಿ ಪ್ರಬಲ ಧ್ವನಿಯಾಗಿದೆ. ತಾಪಮಾನ ಬದಲಾವಣೆ ಒಂದು ಸವಾಲು. ದೇಶದಲ್ಲಿ 2030ರ ವೇಳೆಗೆ ಕಾರ್ಬನ್‌ ಹೊರಸೂಸುವಿಕೆಯನ್ನು 1 ಬಿಲಿಯನ್‌ ಟನ್‌ನಷ್ಟು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

* ’ಬೇಟಿ ಬಚಾವೋ, ಬೇಟಿ ಪಢಾವೋ‘ ಕಾರ್ಯಕ್ರಮ ಉತ್ತಮ ಫಲ ನೀಡಿದೆ. ಶಾಲೆಗಳಲ್ಲಿ ಬಾಲಕಿಯರ ಹಾಜರಾತಿ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ.

ಕೇಂದ್ರ ಸಚಿವರ ವಿರುದ್ಧ ಹಕ್ಕುಚ್ಯುತಿ; ನಿಲುವಳಿ ಮಂಡಿಸಲು ನೋಟಿಸ್‌

ನವದೆಹಲಿ: ಪೆಗಾಸಸ್‌ ಕುತಂತ್ರಾಂಶ ಪ್ರಕರಣ ಸಂಬಂಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಕಳೆದ ವರ್ಷ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ಸಿಪಿಐ ಸಂಸದ ಬಿನೋಯ್‌ ವಿಶ್ವಂ ಅವರು ನೋಟಿಸ್ ನೀಡಿದ್ದಾರೆ.

ಪೆಗಾಸಸ್ ಕುರಿತಂತೆ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಬಿನೋಯ್‌ ವಿಶ್ವಂ ಈಗ ನೋಟಿಸ್‌ ನೀಡಿದ್ದಾರೆ. ಈ ವರದಿ ಪ್ರಕಾರ, ಕುತಂತ್ರಾಂಶವು ಇಸ್ರೇಲ್‌ ಜೊತೆಗೆ 2017ರಲ್ಲಿ ನಡೆದಿದ್ದ ರಕ್ಷಣಾ ಪರಿಕರ ವಹಿವಾಟಿನ ಭಾಗವೇ ಆಗಿತ್ತು.

ಕಳೆದ ವರ್ಷ ಜುಲೈನಲ್ಲಿ ಮುಂಗಾರು ಅಧಿವೇಶನದಲ್ಲಿ ವೈಷ್ಣವ್‌ ಅವರು, ‘ಪೆಗಾಸಸ್‌ ಕುರಿತು ಅಧಿವೇಶನ ಸಂದರ್ಭದಲ್ಲಿಯೇ ಲೇಖನ ಪ್ರಕಟವಾಗಿರುವುದು ಕಾಕತಾಳೀಯ ಅಲ್ಲ. ಇದನ್ನು ಪ್ರಮುಖವಾಗಿ ಪರಿಗಣಿಸಲು ಆಧಾರಗಳಿಲ್ಲ’ ಎಂದಿದ್ದರು.

ರಾಜ್ಯಸಭೆ ಸದಸ್ಯರಾದ ವಿಶ್ವಂ ಅವರು, ‘ಸತ್ಯವನ್ನು ಅಡಗಿಸಲು ಸರ್ಕಾರದ ಪುನರಾವರ್ತಿತ ಯತ್ನಗಳ ನಡುವೆಯೂ, ಪೆಗಾಸಸ್‌ ಕುತಂತ್ರಾಂಶ ಖರೀದಿ ಕುರಿತಂತೆ ವಿವಿಧ ಸತ್ಯಗಳು ಹೊರಬೀಳುತ್ತಿವೆ. ನ್ಯೂಯಾರ್ಕ್‌ ಟೈಮ್ಸ್ ವರದಿ ಈ ಪಟ್ಟಿಗೆ ಹೊಸ ಸೇರ್ಪಡೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.