ADVERTISEMENT

ಮೇಕ್ ಇನ್ ಇಂಡಿಯಾ ವಿಫಲ: ರಾಹುಲ್ ಗಾಂಧಿ

ಪಿಟಿಐ
Published 3 ಫೆಬ್ರುವರಿ 2025, 21:15 IST
Last Updated 3 ಫೆಬ್ರುವರಿ 2025, 21:15 IST
   

ನವದೆಹಲಿ: ‘ಮೇಕ್‌ ಇನ್‌ ಇಂಡಿಯಾ ವಿಫಲವಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಚೀನಾದ ಉತ್ಪನ್ನಗಳು ರಾರಾಜಿಸುತ್ತಿವೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಟೀಕಿಸಿದರು.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಸುಮಾರು 43 ನಿಮಿಷ ಭಾಷಣ ಮಾಡಿದ ಅವರು, ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಭಾರತ– ಚೀನಾ ಗಡಿ ವಿವಾದ, ಭಾರತದ ವಿದೇಶಾಂಗ ನೀತಿಯನ್ನು ಪ್ರಸ್ತಾಪಿಸಿ ಟೀಕಿಸಿದರು.

‘2014ರಲ್ಲಿ ತಯಾರಿಕಾ ವಲಯದ ಪಾಲು ಶೇ 15.3ರಷ್ಟಿದ್ದರೆ, ಈಗ ಶೇ 12.6ಕ್ಕೆ ಕುಸಿದಿದೆ. ತಯಾರಿಕಾ ವಲಯ ಈ ರೀತಿ ಕುಸಿತ ಕಂಡದ್ದು ಕಳೆದ 60 ವರ್ಷಗಳಲ್ಲಿ ಇದೇ ಮೊದಲು. ನಾನು ಇದಕ್ಕಾಗಿ ಪ್ರಧಾನಿ ಅವರನ್ನು ದೂಷಿಸುತ್ತಿಲ್ಲ. ಅವರು ಪ್ರಯತ್ನಿಸಲಿಲ್ಲ ಎಂದು ಹೇಳುವುದು ನ್ಯಾಯೋಚಿತವಲ್ಲ. ‘ಮೇಕ್‌ ಇನ್‌ ಇಂಡಿಯಾ’ ಒಳ್ಳೆಯ ಪರಿಕಲ್ಪನೆಯಾಗಿದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಚೀನಾದಿಂದ 4 ಸಾವಿರ ಚದರ ಕಿ.ಮೀ ಅತಿಕ್ರಮಣ’

ಭಾರತ– ಚೀನಾ ಗಡಿ ವಿವಾದವನ್ನು ಪ್ರಸ್ತಾಪಿಸಿದ ರಾಹುಲ್‌ ‘ಚೀನಾವು ನಮ್ಮ 4 ಸಾವಿರ ಚದರ ಕಿ.ಮೀ.ನಷ್ಟು ಪ್ರದೇಶವನ್ನು ಅತಿಕ್ರಮಿಸಿದೆ’ ಎಂದು ಹೇಳಿದರು.  ‘ಚೀನಾದ ಸೇನೆ ಭಾರತದ ಗಡಿಯೊಳಗೆ ಇದೆಯಾದರೂ ಪ್ರಧಾನಿ ಅವರು ಚೀನಾದ ಅತಿಕ್ರಮಣವನ್ನು ಅಲ್ಲಗಳೆಯುತ್ತಾ ಬಂದಿದ್ದಾರೆ. ಆದರೆ ಸೇನೆಯು ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದೆ. ಚೀನಾ ಸೇನೆಯು ನಮ್ಮ ಗಡಿಯೊಳಗೆ ಇದೆ ಎಂದು ಸೇನೆಯ ಮುಖ್ಯಸ್ಥರೇ ಹೇಳಿದ್ದಾರೆ’ ಎಂದರು.  ಈ ವೇಳೆ ಮಧ್ಯಪ್ರವೇಶಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ‘ನಿಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಪುರಾವೆಗಳನ್ನು ಒದಗಿಸಬೇಕು’ ಎಂದು ಹೇಳಿದರು. ‘ಮೇಕ್‌ ಇನ್‌ ಇಂಡಿಯಾ ವಿಫಲವಾಗಿರುವುದು ಮತ್ತು ತಯಾರಿಕೆಯಲ್ಲಿ ನಾವು ಆಸಕ್ತಿ ತೋರದೇ ಇರುವುದರಿಂದಲೇ ಚೀನಾದವರು ಇಂದು ನಮ್ಮ ದೇಶದೊಳಗೆ ಬಂದು ಕುಳಿತಿದ್ದಾರೆ’ ಎಂದು ರಾಹುಲ್‌ ಹೇಳಿದರು. 

‘ಯುಪಿಎ ಕೂಡಾ ವಿಫಲವಾಗಿತ್ತು’

ದೇಶದಲ್ಲಿ ನಿರುದ್ಯೋಗ ಸಮಸ್ಯೆ ನೀಗಿಸಲು ಹಿಂದಿನ ಯುಪಿಎ ಸರ್ಕಾರ ಕೂಡಾ ವಿಫಲವಾಗಿತ್ತು ಎಂದು ರಾಹುಲ್‌ ಹೇಳಿದರು. ‘ನಾವು ಬೆಳವಣಿಗೆ ಸಾಧಿಸುತ್ತಿರುವುದು ನಿಜ. ಆದರೆ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಯುಪಿಎ ಆಗಿರಲಿ ಅಥವಾ ಈಗಿನ ಎನ್‌ಡಿಎ ಆಗಿರಲಿ ನಿರುದ್ಯೋಗವನ್ನು ನೀಗಿಸಲು ಮತ್ತು ಯುವಕರಿಗೆ ಉದ್ಯೋಗದ ಬಗ್ಗೆ ಖಾತರಿ ನೀಡಲು ವಿಫಲವಾಗಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.