ADVERTISEMENT

ಸಶಸ್ತ್ರ ಪಡೆ ಸಿಬ್ಬಂದಿಗೆ 412 ಶೌರ್ಯ ಪ್ರಶಸ್ತಿ ಅನುಮೋದಿಸಿದ ರಾಷ್ಟ್ರಪತಿ

ಪಿಟಿಐ
Published 25 ಜನವರಿ 2023, 22:24 IST
Last Updated 25 ಜನವರಿ 2023, 22:24 IST
   

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 74ನೇ ಗಣರಾಜ್ಯೋತ್ಸವದ ಮುನ್ನಾದಿನ ಬುಧವಾರದಂದು ಸಶಸ್ತ್ರಪಡೆಯ ಸಿಬ್ಬಂದಿಗೆ 6 ಕೀರ್ತಿ ಚಕ್ರಗಳು ಮತ್ತು 15 ಶೌರ್ಯ ಚಕ್ರಗಳು ಸೇರಿದಂತೆ ಒಟ್ಟು 412 ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ.

ಆರು ಕೀರ್ತಿ ಚಕ್ರಗಳಲ್ಲಿ ನಾಲ್ಕು ಕೀರ್ತಿ ಚಕ್ರಗಳನ್ನು ಮರಣೋತ್ತರವಾಗಿ ಹಾಗೂ ಎರಡು ಶೌರ್ಯ ಚಕ್ರಗಳನ್ನು ಮರಣೋತ್ತರವಾಗಿ ನೀಡಲಾಗಿದೆ.

ರಾಷ್ಟ್ರೀಯ ರೈಫಲ್ಸ್‌ನ 62 ಬೆಟಾಲಿಯನ್‌ನ ಡೋಗ್ರಾ ರೆಜಿಮೆಂಟ್‌ನ ಮೇಜರ್ ಶುಭಾಂಗ್ ಮತ್ತು ರಾಷ್ಟ್ರೀಯ ರೈಫಲ್ಸ್‌ನ 44 ಬೆಟಾಲಿಯನ್‌ನ ರಜಪೂತ್ ರೆಜಿಮೆಂಟ್‌ನ ನಾಯಕ್ ಜಿತೇಂದ್ರ ಸಿಂಗ್ ಕೀರ್ತಿ ಚಕ್ರ ಪ್ರಶಸ್ತಿ ವಿಜೇತರು.

ADVERTISEMENT

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ರೋಹಿತ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ದೀಪಕ್ ಭಾರದ್ವಾಜ್ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಾದ ಸೋಧಿ ನಾರಾಯಣ್ ಮತ್ತು ಶ್ರವಣ್ ಕಶ್ಯಪ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರಗಳನ್ನು ನೀಡಲಾಗಿದೆ.

ಶೌರ್ಯ ಚಕ್ರ ಪ್ರಶಸ್ತಿ: ರಾಷ್ಟ್ರೀಯ ರೈಫಲ್ಸ್‌ನ 50ನೇ ಬೆಟಾಲಿಯನ್‌ನ ಕುಮಾನ್ ರೆಜಿಮೆಂಟ್‌ನ ಮೇಜರ್ ಆದಿತ್ಯ ಭದೌರಿಯಾ, ರಾಷ್ಟ್ರೀಯ ರೈಫಲ್ಸ್‌ನ 13ನೇ ಬೆಟಾಲಿಯನ್‌ನ ಕುಮಾನ್ ರೆಜಿಮೆಂಟ್‌ನ ಕ್ಯಾಪ್ಟನ್ ಅರುಣ್ ಕುಮಾರ್, ‌ರಾಷ್ಟ್ರೀಯ ರೈಫಲ್ಸ್‌ನ 9ನೇ ಬೆಟಾಲಿಯನ್‌ನ ಮೆಕ್ಯಾನೈಸ್ಡ್ ಇನ್‌ಫ್ಯಾಂಟ್ರಿಯ ಕ್ಯಾಪ್ಟನ್ ಯುದ್ವೀರ್ ಸಿಂಗ್, ಪ್ಯಾರಾಚೂಟ್ ರೆಜಿಮೆಂಟ್ (ವಿಶೇಷ ಪಡೆಗಳು) ಒಂಬತ್ತನೇ ಬೆಟಾಲಿಯನ್ ಕ್ಯಾಪ್ಟನ್ ರಾಕೇಶ್ ಟಿ.ಆರ್. ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ 6ನೇ ಬೆಟಾಲಿಯನ್‌ನ ನಾಯಕ್ ಜಸ್ಬೀರ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಕಾನ್‌ಸ್ಟೆಬಲ್ ಮುದಾಸಿರ್ ಅಹ್ಮದ್ ಶೇಖ್ ಅವರಿಗೆ ಮರಣೋತ್ತರವಾಗಿ ಶೌರ್ಯಚಕ್ರ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಲ್ಯಾನ್ಸ್ ನಾಯಕ್ ವಿಕಾಸ್ ಚೌಧರಿ, ಗ್ರೂಪ್ ಕ್ಯಾಪ್ಟನ್ ಯೋಗೇಶ್ವರ್ ಕೃಷ್ಣರಾವ್ ಕಂದಲ್ಕರ್ (ಪೈಲಟ್), ಫ್ಲೈಟ್ ಲೆಫ್ಟಿನೆಂಟ್ ತೇಜ್‌ಪಾಲ್, ಸ್ಕ್ವಾಡ್ರನ್ ಲೀಡರ್ ಸಂದೀಪ್ ಕುಮಾರ್ ಜಜ್ರಿಯಾ, ಆನಂದ್ ಸಿಂಗ್ (ಐಎಎಫ್ ಗರುಡ್) ಮತ್ತು ಸುನೀಲ್ ಕುಮಾರ್ (ಐಎಎಫ್) ಅವರಿಗೂ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ.

ಸಹಾಯಕ ಕಮಾಂಡೆಂಟ್ ಸತೇಂದ್ರ ಸಿಂಗ್ (‌ಎಂಎಚ್‌ಎ), ಉಪ ಕಮಾಂಡೆಂಟ್ ವಿಕ್ಕಿ ಕುಮಾರ್ ಪಾಂಡೆ (ಎಂಎಚ್‌ಎ) ಮತ್ತು ಕಾನ್‌ಸ್ಟೆಬಲ್ ವಿಜಯ್ ಓರಾನ್ ಅವರಿಗೂ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.