ADVERTISEMENT

ಇ–ರುಪಿ: ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರಧಾನಿ ಮೋದಿ ಚಾಲನೆ

ಪಿಟಿಐ
Published 2 ಆಗಸ್ಟ್ 2021, 12:40 IST
Last Updated 2 ಆಗಸ್ಟ್ 2021, 12:40 IST
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ   

ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ಪಾವತಿ ವ್ಯವಸ್ಥೆ ‘ಇ–ರುಪಿ’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಸರ್ಕಾರದ ಹಣಕಾಸು ಪ್ರಯೋಜನಗಳು ನೇರವಾಗಿ ನಾಗರಿಕರಿಗೆ 'ಸೋರಿಕೆ ರಹಿತ' ವಾಗಿ ತಲುಪುವುದನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

‘ಇಂದು ದೇಶವು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮವನ್ನು ನೀಡಿದೆ. ದೇಶದ ಡಿಜಿಟಲ್ ವಹಿವಾಟುಗಳಲ್ಲಿ ಪಾವತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಇ–ರುಪಿ ದೊಡ್ಡ ಪಾತ್ರವನ್ನು ವಹಿಸಲಿದೆ. ಈ ಪಾರದರ್ಶಕ ಮತ್ತು ಸೋರಿಕೆ ರಹಿತ ವಿತರಣಾ ವ್ಯವಸ್ಥೆ ಎಲ್ಲರಿಗೂ ಅನುಕೂಲವಾಗಲಿದೆ.’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಈ ಹೊಸ ಪಾವತಿ ವ್ಯವಸ್ಥೆಯ ಅಡಿಯಲ್ಲಿ, ಫಲಾನುಭವಿಗಳು ಎಲೆಕ್ಟ್ರಾನಿಕ್ ವೋಚರ್ ಅಥವಾ ಕೂಪನ್ ಅನ್ನು ಪಡೆಯುತ್ತಾರೆ. ಅದನ್ನು ಅವರು ಆನ್‌ಲೈನ್ ಬ್ಯಾಂಕಿಂಗ್, ಪಾವತಿ ಅಪ್ಲಿಕೇಶನ್‌ಗಳು ಮತ್ತು ಇತರ ಸಾಂಪ್ರದಾಯಿಕ ಪಾವತಿ ವಿಧಾನಗಳಿಲ್ಲದೆ ಬಳಸಬಹುದು. ಸರಳ ಭಾಷೆಯಲ್ಲಿ ಹೇಳುವುದಾದರೆ, ಇ–ರುಪಿ, ಪಾವತಿ ವಿಧಾನವು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ. ಸೊಡೆಕ್ಸೊ ವೋಚರ್‌ಗಳಂತೆಯೇ ಈ ಡಿಜಿಟಲ್ ಕೂಪನ್‌ಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು, ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಸರ್ಕಾರ ಮಾತ್ರವಲ್ಲ, ಯಾವುದೇ ಸಾಮಾನ್ಯ ಸಂಸ್ಥೆಯು ಯಾರಿಗಾದರೂ ಅವರ ಚಿಕಿತ್ಸೆಯಲ್ಲಿ, ಶಿಕ್ಷಣದಲ್ಲಿ ಅಥವಾ ಇನ್ನಾವುದೇ ಕೆಲಸಕ್ಕೆ ಸಹಾಯ ಮಾಡಲು ಬಯಸಿದರೆ, ಅವರು ನಗದು ಬದಲಿಗೆ ಇ–ರುಪಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ವ್ಯವಸ್ಥೆಯು ನೀಡಿದ ಹಣವನ್ನು ಉದ್ದೇಶಿತ ಕೆಲಸಕ್ಕೇ ಬಳಸುವುದನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.