ADVERTISEMENT

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್‌ ನಿಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 2:04 IST
Last Updated 31 ಡಿಸೆಂಬರ್ 2022, 2:04 IST
ಹೀರಾಬೆನ್ ಮೋದಿ ಅವರೊಂದಿಗೆ ನರೇಂದ್ರ ಮೋದಿ
ಹೀರಾಬೆನ್ ಮೋದಿ ಅವರೊಂದಿಗೆ ನರೇಂದ್ರ ಮೋದಿ   

ಅಹಮದಾಬಾದ್‌:ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್‌ (100) ಅವರು ಅನಾರೋಗ್ಯದಿಂದ ಶುಕ್ರವಾರ ನಸುಕಿನ 3.39ಕ್ಕೆ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಅಹಮದಾಬಾದ್‌ನ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.

ಮೋದಿ ಅವರು ತಾಯಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯರು ಆರೋಗ್ಯಸ್ಥಿತಿ ಸುಧಾರಿಸುತ್ತಿರುವುದಾಗಿ ಮಾಹಿತಿ ನೀಡಿದ ನಂತರ ಮೋದಿ ತೆರಳಿದ್ದರು. ಗುರುವಾರವೂ ವೈದ್ಯಕೀಯ ಬುಲೆಟಿನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದೇ ಹೇಳಲಾಗಿತ್ತು.

ADVERTISEMENT

ಹೀರಾಬೆನ್‌ ಅವರಿಗೆ ಐವರು ಪುತ್ರರಾದ ನರೇಂದ್ರ ಮೋದಿ, ಸೋಮಭಾಯಿ, ಅಮೃತ್‌ಭಾಯಿ, ಪ್ರಹ್ಲಾದ್‌ಭಾಯಿ, ಪಂಕಜ್‌ಭಾಯಿ ಹಾಗೂಪುತ್ರಿ ವಾಸಂತಿಬೆನ್‌ ಇದ್ದಾರೆ.

ಹೀರಾಬೆನ್‌ ಅವರು ಮೋದಿ ಯವರ ಕಿರಿಯ ತಮ್ಮ ಪಂಕಜ್‌ಭಾಯಿ ಅವರೊಟ್ಟಿಗೆ ಗಾಂಧಿನಗರದ ರಾಯ್‌ಸೆನ್‌ ಗ್ರಾಮದಲ್ಲಿ ನೆಲೆಸಿದ್ದರು.

ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಯ್‌ಸನ್‌ ಗ್ರಾಮಕ್ಕೆ ಆಗಮಿಸಿದ ಮೋದಿ ಅವರು, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಹೋದರರೊಂದಿಗೆ ಮೋದಿ ಅವರು ಅಂತಿಮ ಯಾತ್ರೆಯಲ್ಲಿ ಹೆಗಲುಕೊಟ್ಟರು. ಬೆಳಿಗ್ಗೆ 9.30ರ ಸುಮಾರಿಗೆ ಗಾಂಧಿ ನಗರದ ಚಿತಾಗಾರದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ಚಿತೆಗೆ ಮೋದಿ ಅಗ್ನಿಸ್ಪರ್ಶ ಮಾಡಿದರು.

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌, ಮಾಜಿ ಮುಖ್ಯಮಂತ್ರಿಗಳಾದ ವಿಜಯ್‌ ರೂಪಾಣಿ, ಶಂಕರಸಿಂಹ ವಘೇಲಾ, ಉದ್ಯಮಿ ಗೌತಮ್‌ ಅದಾನಿ, ಆಧ್ಯಾತ್ಮಿಕ ಗುರು ಸ್ವಾಮಿ ಸಚ್ಚಿದಾನಂದ ಹಾಗೂ ಹಲವು ಪ್ರಮುಖರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮೋದಿಯವರ ಹುಟ್ಟೂರು ವಡ್ನಾಗರ್‌ನಲ್ಲಿಕೆಲವು ದಿನಗಳ ನಂತರ ಸಂತಾಪ ಸಭೆ ಆಯೋಜಿಸುವುದಾಗಿ ಕುಟುಂಬ ಸದಸ್ಯರು ವರದಿಗಾರರಿಗೆ ತಿಳಿಸಿದ್ದಾರೆ.

ಅಂತ್ಯಕ್ರಿಯೆ ಮುಗಿಸಿ ಕರ್ತವ್ಯಕ್ಕೆ ಮರಳಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಲ್ಲಿ ಆರಂಭಿಸಿರುವ ಮೊದಲ ವಂದೇ ಭಾರತ್ ರೈಲು ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್‌ ಮೂಲಕ ಪಾಲ್ಗೊಂಡರು.

‘ಅಮ್ಮನಲ್ಲಿ ತ್ರಿಮೂರ್ತಿ ಕಂಡಿದ್ದೆ’: ‘ಅದ್ಭುತ ಶತಾಯುಷಿ ದೇವರ ಪದತಳದಲ್ಲಿ ವಿಶ್ರಾಂತಿ ಪಡೆದಿದ್ದಾರೆ.ಅವರ ಜೀವನವು ತಪಸ್ವಿಯ ಪಯಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು.ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ’ ಎಂದು ಮೋದಿಟ್ವೀಟ್‌ನಲ್ಲಿ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ‘ಇದೇ ವರ್ಷದ ಜೂನ್‌ 18ರಂದು ಅವರ (ಅಮ್ಮನ) 100ನೇ ವರ್ಷದ ಜನ್ಮದಿನ ಭೇಟಿಯಾಗಿದ್ದೆ. ಆಗ ಅವರು ಸದಾ ನನ್ನ ನೆನಪಿನಲ್ಲಿ ಉಳಿಯುವಂತಹ ‘ನಿನ್ನ ಬುದ್ಧಿ (ಮಿದುಳು) ಬಳಸಿ ಕೆಲಸ ಮಾಡು. ಪರಿಶುದ್ಧ ಬದುಕು ನಡೆಸು’ ಎನ್ನುವ ಮಾತು ಹೇಳಿದ್ದರು’ ಎಂದು ಸ್ಮರಿಸಿದ್ದಾರೆ.

ಅಲ್ಲದೆ, ಮೋದಿ ತಮ್ಮ ತಾಯಿ ನೂರನೇ ಜನ್ಮದಿನಕ್ಕೆ ಕಾಲಿಟ್ಟ ಸಂದರ್ಭ, ತಾಯಿಯ ಬಾಲ್ಯ ಜೀವನ ಮತ್ತು ಸಂಸಾರದ ನೊಗವನ್ನು ಚಿಕ್ಕ ವಯಸಿನಲ್ಲೇ ಹೊತ್ತು,ಬಡತನದ ಬೇಗೆಯಲ್ಲಿ ದೊಡ್ಡ ಕುಟುಂಬವನ್ನು ಸಲಹಿದ ಪರಿಯನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದರು. ‘ನನ್ನ ತಾಯಿ ಎಲ್ಲ ತಾಯಂದಿರಂತೆಯೇ ತುಂಬಾ ಸರಳ ಮತ್ತು ಅಸಾಧಾರಣಳು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.