ADVERTISEMENT

ಕೈದಿಗಳಿಗೂ ಸಾಂವಿಧಾನಿಕ ಹಕ್ಕುಗಳಿವೆ: ದೆಹಲಿ ಹೈಕೋರ್ಟ್‌

ಪಿಟಿಐ
Published 29 ಆಗಸ್ಟ್ 2023, 13:59 IST
Last Updated 29 ಆಗಸ್ಟ್ 2023, 13:59 IST
–
   

ನವದೆಹಲಿ: ಸೆರೆವಾಸ ಅನುಭವಿಸುತ್ತಿರುವ ಕೈದಿಗಳು ಕೂಡ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿಯ ಜೀವಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡ ಬಂದಿಖಾನೆ ಎನಿಸಿರುವ ತಿಹಾರ್‌ ಜೈಲಿನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂಬ ಆರೋಪಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ವೇಳೆ ಹೈಕೋರ್ಟ್‌ ಈ ಮಾತು ಹೇಳಿದೆ.

ತಿಹಾರ್‌ ಜೈಲಿನಲ್ಲಿರುವ ಕುಡಿಯುವ ನೀರು, ನೈರ್ಮಲ್ಯ, ಶೌಚಾಲಯಗಳ ನಿರ್ವಹಣೆ ಸೇರಿದಂತೆ ಮೂಲಸೌಕರ್ಯಗಳ ಕುರಿತು ಕೂಲಂಕಷ ಪರಿಶೀಲನೆ ನಡೆಸಲು ನಾಲ್ವರು ವಕೀಲರನ್ನು ಒಳಗೊಂಡ ಸಮಿತಿಯನ್ನು ಹೈಕೋರ್ಟ್‌ ರಚಿಸಿದೆ.

ADVERTISEMENT

ಡಾ.ಅಮಿತ್‌ ಜಾರ್ಜ್‌, ಸಂತೋಷಕುಮಾರ್ ತ್ರಿಪಾಠಿ, ನಂದಿತಾ ರಾವ್ ಹಾಗೂ ತುಷಾರ್ ಸನ್ನು ಅವರು ಈ ಸಮಿತಿಯಲ್ಲಿದ್ದಾರೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿರುವ ಹೈಕೋರ್ಟ್‌, ಅಷ್ಟರೊಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದೆ.

ಮುಖ್ಯನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ನ್ಯಾಯಪೀಠ ಆಗಸ್ಟ್‌ 23ರಂದು ಈ ಸಂಬಂಧ ಆದೇಶ ಹೊರಡಿಸಿದೆ. ದೆಹಲಿ ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ (ಡಿಎಚ್‌ಸಿಎಲ್ಎಸ್‌ಸಿ) ಈ ಪಿಐಎಲ್‌ ಸಲ್ಲಿಸಿತ್ತು.

ನಾಲ್ವರು ಸದಸ್ಯರ ಸಮಿತಿಗೆ ಎಲ್ಲ ಮಾಹಿತಿ ಹಾಗೂ ನೆರವು ಒದಗಿಸುವಂತೆ ಮಹಾ ನಿರ್ದೇಶಕರಿಗೆ (ಜೈಲುಗಳು) ನ್ಯಾಯಾಲಯ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.