ADVERTISEMENT

ಉತ್ತರ ಪ್ರದೇಶ|ಗಣಿಗಾರಿಕೆ ಸ್ಥಳದಲ್ಲಿ ಬಾಲಕಿಯರಿಗೆ ಲೈಂಗಿಕ ಶೋಷಣೆ: ತನಿಖೆಗೆ ಆದೇಶ

ಚಿತ್ರಕೂಟ ಜಿಲ್ಲೆಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 13:37 IST
Last Updated 8 ಜುಲೈ 2020, 13:37 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಲಖನೌ: ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ಗಣಿಯಲ್ಲಿ ಕೆಲಸ ಮಾಡುವ ಬಡ, ಅಪ್ರಾಪ್ತ ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಶೋಷಣೆಯ ಕುರಿತು ತನಿಖೆ ನಡೆಸಬೇಕೆಂದು ಬುಧವಾರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶೇಷ್‌ಮಣಿ ಪಾಂಡೆ ಹೇಳಿದ್ದಾರೆ.

ಖಾಸಗಿ ಟಿವಿ ವಾಹಿನಿಯೊಂದರ ವರದಿಯಲ್ಲಿಚಿತ್ರಕೂಟ ಜಿಲ್ಲೆಯ ಗಣಿಗಾರಿಕೆ ಸ್ಥಳವೊಂದರಲ್ಲಿ ಕಲ್ಲು ಪುಡಿ ಮಾಡುವ ಕೆಲಸದಲ್ಲಿ ತೊಡಗಿರುವ ಅಪ್ರಾಪ್ತ ಬಾಲಕಿಯರು ತಮ್ಮ ಮೇಲಾಗುತ್ತಿರುವ ಲೈಂಗಿಕ ಶೋಷಣೆ ಕುರಿತು ಹೇಳಿಕೊಂಡಿದ್ದರು. ಇದು ಪ್ರಸಾರವಾದ ಬೆನ್ನಲ್ಲೇ ತನಿಖೆಗೆ ಆದೇಶ ನೀಡಿದ್ದಾರೆ.

ADVERTISEMENT

‘ಗಣಿಗಾರಿಕೆ ಮಾಫಿಯಾದಲ್ಲಿ ತೊಡಗಿರುವವರಿಗೆ ತಮ್ಮನ್ನು ಅರ್ಪಿಸಿಕೊಳ್ಳದಿದ್ದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನು ನಮಗೆ ಒಡ್ಡಲಾಗಿದೆ’ ಎಂದೂ ಬಾಲಕಿಯರು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಗಡಿಭಾಗದಲ್ಲಿರುವ ಚಿತ್ರಕೂಟ ಜಿಲ್ಲೆಯು ಬುಂದೇಲ್ ಖಂಡ್ ಪ್ರಾಂತ್ಯದಲ್ಲಿದ್ದು, ಇದು ಅಕ್ರಮ ಗಣಿಗಾರಿಕೆಗೆ ಕುಖ್ಯಾತವಾಗಿದೆ. ಇಲ್ಲಿ ಕೆಲಸ ಮಾಡುವ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪೂರ್ಣವೇತನ ಪಾವತಿಯಾಗುವುದಿಲ್ಲ ಎನ್ನುವ ಆರೋಪವೂ ಇದೆ.

‘ಬಾಲಕಿಯರ ಕುಟುಂಬದವರು ಇದುವರೆಗೆ ಯಾವುದೇ ದೂರು ನೀಡದ ಕಾರಣ, ಸ್ಥಳೀಯ ಪೊಲೀಸರಿಗೆ ಲೈಂಗಿಕ ಶೋಷಣೆಯ ಬಗ್ಗೆ ಹೆಚ್ಚಿನ ಅರಿವಿಲ್ಲ’ ಎಂದೂ ಜಿಲ್ಲಾಧಿಕಾರಿ ಹೇಳಿದ್ದಾರೆ.

‘ಹಿರಿಯ ಅಧಿಕಾರಿಯನ್ನೊಳಗೊಂಡ ತಂಡವು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಬಗ್ಗೆ ನಾವು ತನಿಖೆ ಕೈಗೊಂಡಿದ್ದೇವೆ’ ಎಂದು ಚಿತ್ರಕೂಟದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.