ಪವನ್ ಕಲ್ಯಾಣ್
ವಿಜಯವಾಡ: ರಾಜ್ಯದ ಗ್ರಾಮ ಪಂಚಾಯತಿ ಮಿತಿಯೊಳಗಿರುವ ಭಾರತೀಯ ಸೇನೆಯಲ್ಲಿರುವ ಸಿಬ್ಬಂದಿಗೆ ಸೇರಿದ ಕುಟುಂಬಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸುವರರಿಗೆ ಗೌರವ ಮತ್ತು ಕೃತಜ್ಞತೆಯ ಸೂಚಕವಾಗಿ ಈ ನಿಯಮ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಈವರೆಗೆ ಸೇನೆಯಲ್ಲಿ ನಿವೃತ್ತರಾದ ಅಧಿಕಾರಿಗಳ ಅಥವಾ ಗಡಿಯಲ್ಲಿ ಸೇವೆ ಸಲ್ಲಿಸುವವರ ಕುಟುಂಬಕ್ಕೆ ಮಾತ್ರ ಆಸ್ತಿ ತೆರಿಗೆ ವಿನಾಯಿತು ಇತ್ತು. ಆದರೆ ಇನ್ನು ದೇಶಾದ್ಯಂತ ನಿಯೋಜಿತ ಸ್ಥಳವನ್ನು ಲೆಕ್ಕಿಸದೆ ಎಲ್ಲಾ ಸಕ್ರಿಯ ಸಿಬ್ಬಂದಿಯ ಕುಟುಂಬಕ್ಕೆ ಈ ನಿಯಮ ಅನ್ವಯಿಸಲಿದೆ. ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, ಸಿಆರ್‌ಪಿಎಫ್ ಮತ್ತು ಅರೆಸೈನಿಕ ಪಡೆಗಳ ಧೈರ್ಯವನ್ನು ಗೌರವಿಸುತ್ತದೆ. ರಾಷ್ಟ್ರಕ್ಕೆ ಅವರ ಸೇವೆ ಅಮೂಲ್ಯವಾದುದು’ ಎಂದು ಬರೆದುಕೊಂಡಿದ್ದಾರೆ.
ಸಿಬ್ಬಂದಿ ಅಥವಾ ಅವರ ಸಂಗಾತಿ, ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿಯು ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಸೈನಿಕ್ ಕಲ್ಯಾಣ ನಿರ್ದೇಶಕರ ಶಿಫಾರಸಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದು ದೇಶವನ್ನು ಕಾಯುವವರಿಗೆ ಆಂಧ್ರಪ್ರದೇಶ ನೀಡುವ ಗೌರವ ಮತ್ತು ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪವನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.