ADVERTISEMENT

ನೂಪುರ್ ಶರ್ಮಾ ಬಂಧನ ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ

ಪಿಟಿಐ
Published 9 ಸೆಪ್ಟೆಂಬರ್ 2022, 14:14 IST
Last Updated 9 ಸೆಪ್ಟೆಂಬರ್ 2022, 14:14 IST
 ನೂಪುರ್ ಶರ್ಮಾ
ನೂಪುರ್ ಶರ್ಮಾ   

ನವದೆಹಲಿ: ಟಿವಿ ಚರ್ಚೆಯೊಂದರ ವೇಳೆ ಪ್ರವಾದಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಅಂತಹ ವಿಷಯಗಳಲ್ಲಿ ಆದೇಶಗಳನ್ನು ಹೊರಡಿಸುವ ಸಂದರ್ಭ ನ್ಯಾಯಾಲಯಗಳು ಎಚ್ಚರಿಕೆಯಿಂದ ಯೋಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್ ನರಸಿಂಹ ಅವರಿದ್ದ ಪೀಠ ಹೇಳಿದೆ.

‘ಇದು ಸರಳ ಮತ್ತು ನಿರುಪದ್ರವವೆಂದು ತೋರುತ್ತದೆ. ಆದರೆ, ಇದು ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ನಿರ್ದೇಶನಗಳನ್ನು ನೀಡುವಾಗ ನ್ಯಾಯಾಲಯವು ಸೂಕ್ಷ್ಮವಾಗಿ ಯೋಚಿಸಬೇಕು. ನಿಮ್ಮ ಮನವಿಯನ್ನು ಹಿಂಪಡೆಯಲು ನಾವು ಸೂಚಿಸುತ್ತಿದ್ದೇವೆ’ ಎಂದು ಪೀಠವು ಹೇಳಿತು.

ADVERTISEMENT

ನಂತರ, ಅರ್ಜಿದಾರರು ಮನವಿಯನ್ನು ಹಿಂತೆಗೆದುಕೊಂಡರು. ಹೀಗಾಗಿ, ಈ ವಿಷಯದ ಕುರಿತಾದ ವಿಚಾರಣೆಯನ್ನು ವಜಾಗೊಳಿಸಲಾಯಿತು.

ಈ ವಿಷಯದ ಬಗ್ಗೆ ‘ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ’ಗಾಗಿ ನಿರ್ದೇಶನಗಳನ್ನು ಕೋರಿ ವಕೀಲ ಅಬು ಸೊಹೆಲ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಪ್ರವಾದಿ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ದೇಶದಾದ್ಯಂತ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸುವ ಮೂಲಕ ಸುಪ್ರೀಂ ಕೋರ್ಟ್ ಈ ಹಿಂದೆ ಶರ್ಮಾ ಅವರ ಮನವಿಯನ್ನು ಪುರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.