ಮಣಿಪುರದ ಇಂಫಾಲ ಪೂರ್ವ ಭಾಗದಲ್ಲಿ ಪ್ರತಿಭಟನೆ ನಡೆಸಿದ ಉದ್ರಿಕ್ತರ ಗುಂಪು ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದರು
ರಾಯಿಟರ್ಸ್ ಚಿತ್ರ
ಇಂಫಾಲ: ನಾಪತ್ತೆಯಾಗಿದ್ದವರ ಮೃತದೇಹಗಳು ಪತ್ತೆಯಾಗುತ್ತಿದ್ದಂತೆಯೇ ಮಣಿಪುರ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ಉದ್ರಿಕ್ತರ ಗುಂಪು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿದೆ. ಇಂಫಾಲದಲ್ಲಿ ಕರ್ಫ್ಯೂ ಜಾರಿ ಮಾಡಿದ್ದು ಕೆಲವು ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತ ಗೊಳಿಸಲಾಗಿದೆ. ರಾಜ್ಯದಲ್ಲಿ ಶಾಂತಿ ನೆಲಸಲು ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವಾಲಯವು ಭದ್ರತಾ ಪಡೆಗಳಿಗೆ ಶನಿವಾರ ಸೂಚನೆ ನೀಡಿದೆ.
ಜಿರೀಬಾಮ್ ಜಿಲ್ಲೆಯಲ್ಲಿ ಸೋಮವಾರ (ನ.11) ನಾಪತ್ತೆಯಾಗಿದ್ದ ಮೈತೇಯಿ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರು ಮಹಿಳೆಯರು, ಎಂಟು ತಿಂಗಳ ಒಂದು ಹಾಗೂ ಎರಡೂವರೆ ತಿಂಗಳ ಎರಡು ಶಿಶುಗಳ ಮೃತದೇಹಗಳು ಪತ್ತೆಯಾಗಿವೆ.
ಮಣಿಪುರ–ಅಸ್ಸಾಂ ಗಡಿಯ ಜಿರಿ ಹಾಗೂ ಬರಾಕ್ ನದಿಗಳ ತಟದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಈ ಸ್ಥಳ ನಾಪತ್ತೆಯಾಗಿದ್ದ ಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿ ಇದೆ. ಒಬ್ಬ ಮಹಿಳೆ ಹಾಗೂ ಎರಡು ಶಿಶುಗಳ ಮೃತದೇಹಗಳು ಶುಕ್ರವಾರ ರಾತ್ರಿ ಪತ್ತೆಯಾಗಿದ್ದವು. ಉಳಿದ ಮೂರು ಮೃತದೇಹಗಳು ಶನಿವಾರ ಪತ್ತೆಯಾಗಿವೆ.
ಶುಕ್ರವಾರ ಪತ್ತೆಯಾದ ಮೃತದೇಹ ಗಳನ್ನು ಅಂದೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಜಿಲ್ಲೆಯ ಬೊರುಬೆಕ್ರಾ ಪ್ರದೇಶದ ಪೊಲೀಸ್ ಠಾಣೆ ಹಾಗೂ ಸಿಆರ್‌ಪಿಎಫ್ ಶಿಬಿರದ ಮೇಲೆ ಕುಕಿ ಬುಡಕಟ್ಟು ಸಮುದಾಯದವರು ಎನ್ನಲಾದ ಶಂಕಿತ ಉಗ್ರರು ಸೋಮವಾರ ದಾಳಿ ನಡೆಸಿದ್ದರು. ‘ಇದೇ ವೇಳೆ ಠಾಣೆಯ ಸಮೀಪವೇ ಇದ್ದ ನಿರಾಶ್ರಿತ ಶಿಬಿರದಿಂದ ಶಂಕಿತ ಉಗ್ರರ ಮತ್ತೊಂದು ತಂಡವು, ಈ ಆರು ಮಂದಿಯನ್ನು ಅಪಹರಿಸಿದ್ದರು’ ಎಂದು ಆರೋಪಿಸಲಾಗಿದೆ.
ಭದ್ರತೆ ಬಿಗಿಗೊಳಿಸಿ: ಗೃಹ ಸಚಿವಾಲಯ ಸೂಚನೆ
‘ಕಳೆದ ಕೆಲವು ದಿನಗಳಿಂದ ಮಣಿಪುರದ ಭದ್ರತಾ ವ್ಯವಸ್ಥೆಯು ‘ದುರ್ಬಲ’ಗೊಂಡಿರುವುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯದಲ್ಲಿ ಶಾಂತಿ ನೆಲೆಸಿ, ಕಾನೂನು ಸುವ್ಯವಸ್ಥೆ ಮರುಸ್ಥಾಪನೆಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯವು ಭದ್ರತಾ ಪಡೆಗಳಿಗೆ ಶನಿವಾರ ನಿರ್ದೇಶನ ನೀಡಿದೆ.
‘ಮಣಿಪುರದಲ್ಲಿ ಎರಡೂ ಸಮುದಾಯಗಳ ದುಷ್ಕರ್ಮಿಗಳು ಹಿಂಸೆಯನ್ನು ಉದ್ದೀಪಿಸುತ್ತಿದ್ದಾರೆ. ಸಾರ್ವಜನಿಕರು ವದಂತಿಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು. ಜೊತೆಗೆ, ಶಾಂತಿ ಸ್ಥಾಪನೆಗಾಗಿ ಜನರು ಭದ್ರತಾ ಪಡೆಗಳೊಂದಿಗೆ ಸಹಕರಿಸಿ’ ಎಂದು ಸಚಿವಾಲಯ ಮನವಿ ಮಾಡಿದೆ. ‘ಹಿಂಸೆಯಲ್ಲಿ ತೊಡಗಿರುವ ಯಾರೇ ಆಗಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದೂ ಭರವಸೆ ನೀಡಿದೆ.
ಮೈತೇಯಿಗಳ ಪ್ರತಿಭಟನೆ
ಆರು ಮೃತದೇಹಗಳು ಪತ್ತೆಯಾದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಮೈತೇಯಿ ಸಮುದಾಯದ ನೂರಾರು ಮಂದಿ ಇಂಫಾಲದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು. ಇಬ್ಬರು ಸಚಿವರು, ಒಬ್ಬ ಶಾಸಕನ ಮನೆಗಳ ಮೇಲೆಯೂ ಪ್ರತಿಭಟನಕಾರರು ದಾಳಿ ನಡೆಸಿದರು. ಅಂಗಡಿಗಳು ಬಂದಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಶನಿವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.
‘ಆರು ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿದ ‘ಕುಕಿ ನುಸುಳುಕೋರ’ರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅಪಹರಿಸಲಾಗಿದ್ದ ಆರು ಮಂದಿಯನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಭದ್ರತಾ ಪಡೆಗಳು ಸೋತಿವೆ. ನಮಗೆ ನ್ಯಾಯ ಬೇಕು’ ಎಂದು ಆಗ್ರಹಿಸಿದ ಪ್ರತಿಭಟನಕಾರರು ರಸ್ತೆ ತಡೆ ನಡೆಸಿ, ಟೈರ್‌ಗಳನ್ನು ಸುಟ್ಟು ಹಾಕಿದರು.
ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಇಂಫಾಲದಲ್ಲಿ ಶನಿವಾರ ಸಂಜೆ 4.30ರಿಂದ ಕರ್ಫ್ಯೂ ಜಾರಿ ಮಾಡಲಾಯಿತು. ‘ಮುಂದಿನ ಆದೇಶದವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ’ ಎಂದು ಅಧಿಕಾರಿಗಳು ತಿಳಿಸಿದರು. ಜೊತೆಗೆ, ಹಿಂಸಾಚಾರ ಪೀಡಿತ ಕೆಲವು ಜಿಲ್ಲೆಗಳಲ್ಲಿ ಶನಿವಾರ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
‘ಇಂಫಾಲದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆಯೇ, ಆರು ಪೊಲೀಸ್ ಠಾಣೆಗಳನ್ನು ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958 (ಆಫ್‌ಸ್ಫಾ)’ ವ್ಯಾಪ್ತಿಗೆ ತಂದಿರುವುದರ ಕುರಿತು ಮರುಪರಿಶೀಲಿಸಿ’ ಎಂದು ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರವು ಮನವಿ ಮಾಡಿದೆ.
ತಮಗೆ ನ್ಯಾಯ ದೊರಕಿಸಲು ಸೋತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಆರೋಗ್ಯ ಸಚಿವ ಸಪಮ್ ರಂಜನ್ ಹಾಗೂ ಗ್ರಾಹಕ ವ್ಯವಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವ ಎಲ್. ಸುಸಿಂದ್ರೊ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿದರು
ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಅಳಿಯ ಆರ್.ಕೆ. ಇಮೊ ಅವರ ನಿವಾಸದ ಮೇಲೆಯೂ ದಾಳಿ ಮಾಡಲಾಗಿದೆ. ‘24 ಗಂಟೆಗಳ ಒಳಗೆ ತಪ್ಪಿತಸ್ಥರನ್ನು ಬಂಧಿಸಿ’ ಎಂದು ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು
ಇಂಫಾಲದ ಕೈಶಂಥೊಂಗ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಸಪಮ್ ನಿಶಿಕಾಂತ್ ಸಿಂಗ್ ಅವರನ್ನು ಭೇಟಿ ಮಾಡಲು ಪ್ರತಿಭಟನಕಾರರು ತೆರಳಿದ್ದರು. ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಅವರ ಮನೆ ಮೇಲೆ ದಾಳಿ ನಡೆಸಿದರು. ಅವರ ನೇತೃತ್ವದ ಪತ್ರಿಕೆಯ ಕಚೇರಿ ಮೇಲೆಯೂ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ
ಕುಕಿಗಳ ಪ್ರತಿಭಟನೆ
‘ಮೃತದೇಹಗಳನ್ನು ನಮಗೆ ಹಸ್ತಾಂತರಿಸಿ’ ಎಂದು ಆಗ್ರಹಿಸಿ ಕುಕಿ ಬುಡಕಟ್ಟು ಸಮುದಾಯದವರು ಎನ್ನಲಾದ 11 ಮಂದಿ ಶಂಕಿತ ಉಗ್ರರ ಕುಟುಂಬಸ್ಥರು ಹಾಗೂ ಸಮುದಾಯದ ನೂರಾರು ಮಂದಿ ಅಸ್ಸಾಂನ ‘ಸಿಲ್‌ಚರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ಯ ಎದುರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ಜಿರೀಬಾಮ್ ಜಿಲ್ಲೆಯ ಬೊರುಬೆಕ್ರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ಉಗ್ರರ ನಡುವೆ ಸೋಮವಾರ ನಡೆದಿದ್ದ ಗುಂಡಿನ ದಾಳಿಯಲ್ಲಿ 11 ಮಂದಿ ಶಂಕಿತ ಉಗ್ರರ ಮೃತಪಟ್ಟಿದ್ದರು. ‘ಮೃತದೇಹಗಳನ್ನು ಮಣಿಪುರ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಅವರಲ್ಲಿಯೇ ಮೃತದೇಹಗಳನ್ನು ಪಡೆದುಕೊಳ್ಳಿ’ ಎಂದು ಅಸ್ಸಾಂ ಪೊಲೀಸರು ಮನವಿ ಮಾಡಿದರೂ ಪ್ರತಿಭಟನಕಾರರು ಪ್ರತಿಭಟನೆ ಕೈಬಿಡಲಿಲ್ಲ.
ಆಕ್ರೋಶಗೊಂಡ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಸ್ಸಾಂ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಮೃತದೇಹಗಳ ಹಸ್ತಾಂತರ ಪ್ರಕ್ರಿಯೆ ಕುರಿತು ಪೊಲೀಸರು ಕುಟುಂಬಸ್ಥರಿಗೆ ಮತ್ತೊಮ್ಮೆ ತಿಳಿ ಹೇಳಿದ ಬಳಿಕ, ಪ್ರತಿಭಟನಕಾರರು ಪ್ರತಿಭಟನೆಯನ್ನು ಹಿಂಪಡೆದರು. ಶನಿವಾರ ಮಧ್ಯಾಹ್ನದ ವೇಳೆಗೆ 11 ಮಂದಿ ಶಂಕಿತ ಉಗ್ರರ ಮೃತದೇಹಗಳನ್ನು ಹೆಲಿಕಾಪ್ಟರ್ ಮೂಲಕ ಚುರಚಾಂದ್‌ಪುರಕ್ಕೆ ರವಾನಿಸಲಾಗಿದೆ. ಸಿಲ್‌ಚರ್ ಆಸ್ಪತ್ರೆಯಲ್ಲಿ ಈ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
‘ಅವರು ಗ್ರಾಮ ಸ್ವಯಂರಕ್ಷಕರು’: 11 ಮಂದಿ ಶಂಕಿತ ಉಗ್ರರರನ್ನು ಕುಕಿ–ಜೊ ಬುಡಕಟ್ಟು ಸಮುದಾಯಗಳ ಸಂಘಟನೆಯೊಂದು ‘ಗ್ರಾಮ ಸ್ವಯಂರಕ್ಷಕರು’ ಎಂದು ಕರೆದಿದ್ದಾರೆ. ‘ಇವರು ಕುಕಿ ಸಮುದಾಯದ ಒಳಪಂಗಡವಾದ ಹಮರ್ ಸಮುದಾಯಕ್ಕೆ ಸೇರಿದವರು. ಮೈತೇಯಿಗಳಿಂದ ಉಂಟಾಗಬಹುದಾದ ದಾಳಿಯಿಂದ ಗ್ರಾಮಸ್ಥರನ್ನು ರಕ್ಷಿಸಲು ಅವರು ಕೆಲಸ ಮಾಡುತ್ತಿದ್ದರು. ಮೈತೇಯಿ ಸಮುದಾಯದ ತೀವ್ರಗಾಮಿ ಗುಂಪು ‘ಅರಂಬಿ ಥೆನ್‌ಗೋಲ್’ನ ಶಸ್ತ್ರಧಾರಿಗಳು ಪೊಲೀಸ್ ಠಾಣೆಯೊಳಗೆ ನುಗ್ಗಿದ್ದಾರೆ ಎಂಬ ಮಾಹಿತಿ ಬಂದಿತ್ತು. ಆದ್ದರಿಂದ ಅವರು ಠಾಣೆ ಮೇಲೆ ದಾಳಿ ನಡೆಸಿದರು’ ಎಂದು ಸಂಘಟನೆ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗ ತಮ್ಮ ‘ವಿಲಾಸಿ ವಿದೇಶ ಪ್ರವಾಸ’ಕ್ಕೆ ತೆರಳಿದ್ದಾರೆ (ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಅವರು ಶನಿವಾರ ಬ್ರೆಜಿಲ್‌ಗೆ ತೆರಳಿದರು). ವಿದೇಶದಲ್ಲಿ ನಿಂತು ಅವರು ಭಾರತದ ರಾಜಕಾರಣ ಮಾತನಾಡುತ್ತಾ, ವೈಯಕ್ತಿಕ ಲಾಭ ಪಡೆದುಕೊಳ್ಳಲು ಹವಣಿಸುತ್ತಾರೆ ಹೊರತು ಒಬ್ಬ ಜವಾಬ್ದಾರಿಯುತ ರಾಜಕಾರಣ ರೀತಿಯಲ್ಲಿ ವರ್ತಿಸುವುದಿಲ್ಲ. ಇದೇನೇ ಇದ್ದರೂ, ನರೇಂದ್ರ ಮೋದಿ ಅವರು ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡುವುದೇ ಇಲ್ಲ ಎಂದು ಯಾಕಾಗಿ ಇಷ್ಟೊಂದು ದೃಢವಾಗಿ ನಿರ್ಧರಿಸಿದ್ದಾರೆಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪಟ್ಟಭದ್ರ ಹಿತಾಸಕ್ತಿಗಳು ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾವೆ. ಹಮರ್ ಹಾಗೂ ಮೈತೇಯಿ ಸಮುದಾಯದವರ ಹತ್ಯೆ ಪ್ರಕರಣಗಳು ಆಘಾತ ಉಂಟು ಮಾಡಿದೆ. ಇದನ್ನು ಖಂಡಿಸಲಾಗುತ್ತದೆ. ಅಕ್ರಮಗಳಲ್ಲಿ ತೊಡಗಿರುವ ಅಮಾನುಷ ಅಪರಾಧಗಳನ್ನು ನಡೆಸುತ್ತಿರುವ ಸಂಘನೆಗಳನ್ನು ‘ಕಾನೂನುಬಾಹಿರ ಸಂಘಟನೆಗಳು’ ಎಂಬುದಾಗಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಸಲ್ಲಿಸಲು ಸಂಪುಟವು ಶಿಫಾರಸು ಮಾಡಿದೆಮುಖ್ಯಮಂತ್ರಿ ಬಿರೇನ್ ಸಿಂಗ್ ಕಚೇರಿಯ ಹೇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.