ಶ್ರೀನಗರ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಮೆಹರಾಜ್ ಮಲಿಕ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ (ಪಿಎಸ್‌ಎ) ಜಮ್ಮು ಮತ್ತು ಕಾಶ್ಮೀರದ ಆಡಳಿತವು ಬಂಧಿಸಿದೆ.
ಕಠಿಣ ಕಾಯ್ದೆಯಡಿ ಶಾಸಕರೊಬ್ಬರು ಬಂಧಿತರಾಗಿರುವುದು ಇದೇ ಮೊದಲು. ವಿಚಾರಣೆ ನಡೆಸದೆ ಎರಡು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣ ಇದಾಗಿದೆ.
ಉಪಆಯುಕ್ತರ ವಿರುದ್ಧ ನಿಂದನಾತ್ಮಕ ಭಾಷೆಯನ್ನು ಬಳಸಿದ ಆರೋಪದ ಮೇಲೆ ದೋಡಾ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಬಂಧಿಸಲಾಗಿದೆ.
ಮೆಹರಾಜ್ ಮಲಿಕ್ ಅವರು ಅಧಿಕಾರಿಯನ್ನು ನಿಂದಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಪಿಎಸ್‌ಎ ಅಡಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಥಾತ್ರಿಯ ಕೆಂಚಾದಲ್ಲಿರುವ ಎಎಎಂ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸುವಾಗ ಸರ್ಕಾರಿ ಕೆಲಸಕ್ಕೆ ಅಡ್ಡಿಪಡ್ಡಿಸಿದ್ದಾರೆ ಹಾಗೂ ವೈದ್ಯಕೀಯ ಉಪಕರಣಗಳು ಮತ್ತು ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಶಾಸಕರ ವಿರುದ್ಧ ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ದೂರು ನೀಡಿದ್ದಾರೆ.
ಆಸ್ಪತ್ರೆಯ ಉಪಕರಣಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ಮಲಿಕ್ ಮತ್ತು ಅವರ ಐವರು ಬೆಂಬಲಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಲಿಕ್ ವಿರುದ್ಧ ಕಳೆದ ಮೇ ತಿಂಗಳಿನಲ್ಲೂ ಪ್ರಕರಣವೊಂದು ದಾಖಲಾಗಿದೆ.
‘ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಪ್ರಜಾಪ್ರಭುತ್ವ ವಿರೋಧಿ ನಡೆಯಿದು. ಅಧಿಕಾರಶಾಹಿಯ ದುರಂಹಕಾರವನ್ನು ಪ್ರತಿಬಿಂಬಿಸಿದೆ. ಎಫ್‌ಐಆರ್ ರದ್ದುಗೊಳಿಸಿ, ಶಾಸಕರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು’ ಎಂದು ಜಮ್ಮು–ಕಾಶ್ಮೀರದ ಎಎಪಿ ವಕ್ತಾರ ಮುದಾಸಿರ್ ಹಸನ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.