ADVERTISEMENT

ಪುಲ್ವಾಮ ಆತ್ಮಾಹುತಿ ದಾಳಿ: ಆರೋಪಿಗಳ ಮನೆ ವಶಪಡಿಸಿಕೊಂಡ ಎನ್ಐಎ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 14:06 IST
Last Updated 17 ಮಾರ್ಚ್ 2021, 14:06 IST
ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯ ದೃಶ್ಯ (ಸಂಗ್ರಹ ಚಿತ್ರ)
ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯ ದೃಶ್ಯ (ಸಂಗ್ರಹ ಚಿತ್ರ)   
ಶ್ರೀನಗರ: 2019ರ ಫೆಬ್ರುವರಿಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣರಾದ ಆರೋಪಿಗಳಾದ ಆದಿಲ್ ದರ್ ಮತ್ತು ಇನ್ಸಾಜಾನ್ ಎಂಬುವರ ಮನೆಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಪಡಿಸಿಕೊಂಡಿದೆ.
ಈ ಇಬ್ಬರು ಉಗ್ರರಿಗೆ ಪುಲ್ವಾಮದಲ್ಲಿ ಪೀಠೋಪಕರಣಗಳ ಅಂಗಡಿ ಮಾಲೀಕ ಶಕೀರ್ ಬಷೀರ್ ಮ್ಯಾಗ್ರೆ ಎಂಬಾತ ಆಶ್ರಯ ನೀಡಿದ್ದ. 2020ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಮ್ಯಾಗ್ರೆ ಮತ್ತು ಜಾನ್ ಅವರನ್ನು ಎನ್‌ಐಎ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿತ್ತು. ನಂತರ ಇಬ್ಬರ ಹೆಸರನ್ನೂ ಚಾರ್ಚ್‌ಶೀಟ್‌ನಲ್ಲಿ ಹೆಸರಿಸಲಾಗಿತ್ತು. ಕಾನೂನು ಬಾಹಿರ ಚಟುವಟಿಕೆಗಳು (ತಡಗೆಟ್ಟುವಿಕೆ) ಕಾಯ್ದೆ (ಯುಎಪಿಸಿ)1967ರ ಸೆಕ್ಷನ್ 25ರ ಅಡಿಯಲ್ಲಿ ಎನ್ಐಎ ಮನೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
‘ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿರುವವರೂ ಸೇರಿದಂತೆ ಜೈಷ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಉಗ್ರರಿಗೂ ಹಲವು ಸಂದರ್ಭಗಳಲ್ಲಿ ಶಸ್ತ್ತಾಸ್ತ್ರ, ಮದ್ದುಗುಂಡು, ನಗದು ಸೇರಿದಂತೆ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ ಎಂದು ವಿಚಾರಣೆಯ ಸಮಯದಲ್ಲಿ ಮ್ಯಾಗ್ರೆ ಬಹಿರಂಗಪಡಿಸಿದ್ದಾನೆ’ ಎಂದು ಎನ್‌ಐಎ ತಿಳಿಸಿದೆ.
‘‍2018ರಿಂದ 2019ರ ಫೆಬ್ರುವರಿ ತನಕ ಪಾಕಿಸ್ತಾನದ ಪ್ರಜೆಗಳಾದ ಅದಿಲ್ ದರ್ ಮತ್ತು ಮೊಹಮ್ಮದ್ ಉಮರ್ ಫಾರೂಕ್ ಅವರಿಗೆ ಮ್ಯಾಗ್ರೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾನೆ. ಸುಧಾರಿತ ಸ್ಫೋಟಕಗಳ ತಯಾರಿಕೆಗೂ (ಐಇಡಿ) ಉಗ್ರರಿಗೆ ಸಹಾಯ ಮಾಡಿದ್ದ.ಆತ್ಮಾಹುತಿ ದಾಳಿಗೆ ಬಳಸಲಾಗಿದ್ದ ಮಾರುತಿ ಎಕೊ ಕಾರಿನ ಮರು ವಿನ್ಯಾಸ ಮತ್ತು ಐಇಡಿ ಅಳವಡಿಕೆಯಲ್ಲೂ ಮ್ಯಾಗ್ರೆ ಪಾಲ್ಗೊಂಡಿದ್ದ. 2019ರ ಜನವರಿಯಲ್ಲಿ ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಬೆಂಗಾವಲಿನ ಚಲನೆಯ ಮಾಹಿತಿಯನ್ನೂ ಅಧ್ಯಯನ ನಡೆಸಿ, ಉಗ್ರರಿಗೆ ಮಾಹಿತಿ ನೀಡಿದ್ದ’ ಎಂದು ಎನ್ಐಎ ವಿವರಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.