ADVERTISEMENT

ಕೋವಿಡ್‌–19: 2 ಲಕ್ಷ ಪ್ರಕರಣ ದಾಟಿದ ಮೊದಲ ಜಿಲ್ಲೆ ಪುಣೆ

ಪಿಟಿಐ
Published 8 ಸೆಪ್ಟೆಂಬರ್ 2020, 12:53 IST
Last Updated 8 ಸೆಪ್ಟೆಂಬರ್ 2020, 12:53 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಪುಣೆ: ಎರಡು ಲಕ್ಷಕ್ಕೂ ಅಧಿಕ ಕೋವಿಡ್‌–19 ಪ್ರಕರಣಗಳು ವರದಿಯಾದ ದೇಶದ ಮೊದಲ ಜಿಲ್ಲೆಯಾಗಿ ಪುಣೆ ಗುರುತಿಸಿಕೊಂಡಿದೆ.

ಕಳೆದ ಕೆಲವು ದಿನಗಳಿಂದ ಪುಣೆಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಪ್ರಮಾಣದಲ್ಲಿ ದಿಢೀರ್‌ ಏರಿಕೆ ಕಂಡುಬಂದಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿಯಂತೆ, ಪುಣೆ ಜಿಲ್ಲೆಯಲ್ಲಿಸೋಮವಾರ 4,165 ಜನರಲ್ಲಿ ಕೋವಿಡ್‌–19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,03,468ಕ್ಕೆ ಏರಿಕೆಯಾಗಿದೆ. ಕೋವಿಡ್‌–19 ಪರೀಕ್ಷೆಯ ಸಂಖ್ಯೆ ಏರಿಕೆಯಾಗಿರುವುದೇ, ಸೋಂಕಿತರ ಸಂಖ್ಯೆ ಹೆಚ್ಚು ವರದಿಯಾಗಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ 5ರಂದು ಪುಣೆಯಲ್ಲಿ ಒಂದು ಲಕ್ಷ ಕೋವಿಡ್‌–19 ಪ್ರಕರಣಗಳಿದ್ದವು. ಒಂದು ತಿಂಗಳ ಅಂತರದಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪುಣೆಯಲ್ಲಿ ಕೋವಿಡ್‌–19 ಪಾಸಿಟಿವ್‌ ಪ್ರಮಾಣ ಶೇ 22ರಷ್ಟಿದೆ ಎಂದು ಕಲೆಕ್ಟರ್‌ ರಾಜೇಶ್‌ ದೇಶ್‌ಮುಖ್‌ ತಿಳಿಸಿದರು.

ADVERTISEMENT

‘ದೇಶದ ಇತರೆ ಯಾವ ಜಿಲ್ಲೆಯಲ್ಲೂ ಇಷ್ಟು ಪ್ರಮಾಣದ ಕೋವಿಡ್‌ ಪರೀಕ್ಷೆ ನಡೆದಿಲ್ಲ. ಪರೀಕ್ಷೆಯ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಪರಿಣಾಮಕಾರಿಯಾಗಿ ಸೋಂಕಿತರ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಪುಣೆಯಲ್ಲಿ ಗುಣಮುಖ ಪ್ರಮಾಣ ಶೇ 78ರಷ್ಟಿದೆ’ ಎಂದರು.

‘15ಕ್ಕಿಂತ ಹೆಚ್ಚು ಕೋವಿಡ್‌–19 ಪ್ರಕರಣಗಳು ದಾಖಲಾದ ಪುಣೆ ಜಿಲ್ಲೆ 65ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಂಗಳವಾರದಿಂದ ಪರೀಕ್ಷಾ ಕ್ಯಾಂಪ್‌ಗಳನ್ನು ಆರಂಭಿಸಿದ್ದೇವೆ. ಇಲ್ಲಿ ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗಳನ್ನು ನಡೆಸಲಾಗುವುದು’ ಎಂದರು.

ಅಂಕಿಅಂಶ

* 1.57 ಲಕ್ಷ: ಪುಣೆಯಲ್ಲಿ ಗುಣಮುಖರಾದ ಕೋವಿಡ್‌–19 ಸೋಂಕಿತರ ಸಂಖ್ಯೆ

* 4,651: ಪುಣೆಯಲ್ಲಿ ಕೋವಿಡ್‌–19ಗೆ ಮೃತಪಟ್ಟವರ ಸಂಖ್ಯೆ

* ಶೇ 2.3: ಮರಣ ಪ್ರಮಾಣ

ಕೋವಿಡ್‌–19 ಪ್ರಕರಣಗಳು

* ದೆಹಲಿ: 1,93,526

* ಮುಂಬೈ: 1,57,410

* 7,897: ಮುಂಬೈನಲ್ಲಿ ಕೋವಿಡ್‌–19ಗೆ ಮೃತಪಟ್ಟವರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.