ADVERTISEMENT

ಅತ್ಯಾಚಾರ ಪ್ರಕರಣ: ಮಾಜಿ ಎಸ್‌ಪಿಗೆ 10 ವರ್ಷ ಜೈಲು

ಪಿಟಿಐ
Published 22 ಫೆಬ್ರುವರಿ 2019, 18:45 IST
Last Updated 22 ಫೆಬ್ರುವರಿ 2019, 18:45 IST

ಗುರುದಾಸ್‌ಪುರ: ಪಠಾಣ್‌ಕೋಟ್‌ ಮೇಲೆ ದಾಳಿ ನಡೆಯುವ ಒಂದು ಗಂಟೆ ಮುಂಚೆ ಉಗ್ರರಿಂದ ಅಪಹರಣಕ್ಕೀಡಾಗಿದ್ದ ಗುರುದಾಸ್‌ಪುರದ ಮಾಜಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಲ್ವಿಂದರ್‌ ಸಿಂಗ್‌ಗೆ ಅತ್ಯಾಚಾರ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರೇಮ್‌ ಕುಮಾರ್‌, ಸಿಂಗ್‌ ವಿರುದ್ಧದ ಭ್ರಷ್ಟಾಚಾರ ಮತ್ತು ಅತ್ಯಾಚಾರ ಆರೋಪ ಸಾಬೀತಾದ ಕಾರಣಕ್ಕೆ ಈ ಎರಡು ಪ್ರಕರಣಗಳಲ್ಲಿ ತಲಾ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಆದೇಶ ನೀಡಿದ್ದಾರೆ.

ಗುರುವಾರ ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಸಿಂಗ್‌ ಅವರನ್ನು ಭದ್ರತಾ ಕಾರಣಕ್ಕೆ ಗುರುದಾಸ್‌ಪುರ ಜೈಲಿನಲ್ಲಿಟ್ಟುಕೊಳ್ಳಲು ಅಧಿಕಾರಿಗಳು ನಿರಾಕರಿಸಿರುವುದರಿಂದ ಅಮೃತಸರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ADVERTISEMENT

ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯ ಪತಿ ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಗೆ ಆನ್‌ಲೈನ್‌ನಲ್ಲಿ ದೂರು ನೀಡಿದ್ದರು ಎಂದು ಜಿಲ್ಲಾ ಅಟಾರ್ನಿ ಸಲ್ವಾನ್‌ ಸಿಂಗ್‌ ಬಾಜ್ವಾ ಹೇಳಿದ್ದಾರೆ.

ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಸಿಂಗ್ ಅವರ ವಕೀಲ ಹರ್ಭಜನ್‌ ಸಿಂಗ್‌ ಹೇಯರ್‌ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ:
ಎಸ್‌ಪಿ ಆಗಿದ್ದಾಗ ಸಲ್ವಿಂದರ್‌ ಸಿಂಗ್‌ ಅತ್ಯಾಚಾರ ಪ್ರಕರಣವೊಂದರ ತನಿಖೆ ನಡೆಸುವಾಗ ಆರೋಪಿಯ ಮನೆಗೆ ಆಗಾಗ ಭೇಟಿ ಕೊಟ್ಟು, ಆರೋಪಿಯ ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದ ಆಪಾದನೆ ಎದುರಿಸುತ್ತಿದ್ದರು. ಗಂಡನ ವಿರುದ್ಧದ ಪ್ರಕರಣ ಮುಚ್ಚಿಹಾಕಲು ₹50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ಅತ್ಯಾಚಾರಕ್ಕೆ ಒಳಗಾದ ಮಹಿಳೆಯು, ಸಿಂಗ್‌ ವಿರುದ್ಧ ಆರೋಪ ಮಾಡಿದ್ದರು.

ತನಿಖೆ ವೇಳೆ ಸಿಂಗ್‌ ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ದೂರು ದಾಖಲಾದ ನಂತರ ಆರೋಪಿ ಸಿಂಗ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಕೆಲವು ತಿಂಗಳ ಕಾಲ ಆರೋಪಿ ನಾಪತ್ತೆಯಾಗಿದ್ದರು.

‘ಘೋಷಿತ ಅಪರಾಧಿ’ ಎಂದು ಸಿಂಗ್‌ ಅವರನ್ನು ಪರಿಗಣಿಸಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ್ದವು. ಇದರಿಂದಾಗಿ ಸಿಂಗ್‌ 2017ರ ಏಪ್ರಿಲ್‌ 20ರಂದು ಗುರುದಾಸ್‌ಪುರ ನ್ಯಾಯಾಲಯಕ್ಕೆ ಶರಣಾಗಿದ್ದರು.

2016ರ ಜನವರಿಯಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ ನಡೆದಾಗ ನಾಲ್ವರು ಉಗ್ರರು ಸಿಂಗ್‌ ಅವರನ್ನು ಅಪಹರಿಸಿದ್ದರು. ಈ ಪ್ರಕರಣದ ನಂತರ ಸಿಂಗ್‌ ಹೆಸರು ಮುಂಚೂಣಿಗೆ ಬಂದಿತ್ತು. ಆರಂಭದಲ್ಲಿ ರಾಷ್ಟ್ರೀಯ ತನಿಖಾ ದಳವು ಪಠಾಣ್‌ ಕೋಟ್‌ ದಾಳಿಯಲ್ಲಿ ಸಿಂಗ್‌ ಭಾಗಿಯಾಗಿರುವುದಾಗಿ ಶಂಕೆ ವ್ಯಕ್ತಪಡಿಸಿತ್ತು. ತನಿಖೆಯ ನಂತರ ಸಿಂಗ್‌ಗೆ ಕ್ಲೀನ್‌ಚಿಟ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.