ADVERTISEMENT

 ಐಎಸ್‌ಐ ಬೆಂಬಲಿತ ಭಯೋತ್ಪಾದಕ ಘಟಕದ ಮೇಲೆ ದಾಳಿ: ಇಬ್ಬರ ಬಂಧನ

ಪಿಟಿಐ
Published 23 ಸೆಪ್ಟೆಂಬರ್ 2022, 15:40 IST
Last Updated 23 ಸೆಪ್ಟೆಂಬರ್ 2022, 15:40 IST

ಚಂಡೀಗಢ:ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಹಾಗೂ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್ ರಿಂಡಾ ಜಂಟಿಯಾಗಿ ನಿರ್ವಹಿಸುತ್ತಿದ್ದ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಘಟಕ ಮೇಲೆ ದಾಳಿ ನಡೆಸಿರುವ ಪಂಜಾಬ್‌ ಪೊಲೀಸರು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಲಖ್ಬೀರ್ ಸಿಂಗ್ ಎಂಬಾತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಜೊತೆ ಕೈಜೋಡಿಸಿರುವ ಹರ್ವಿಂದರ್ ಸಿಂಗ್‌ನ ಆಪ್ತ ಸಹಾಯಕ. ಈ ಇಬ್ಬರು ಐಎಸ್‌ಐ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಪಂಜಾಬ್ ಪೊಲೀಸ್ ಹೇಳಿಕೆ ತಿಳಿಸಿದೆ.

ಮೇ ತಿಂಗಳಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ದಾಳಿ ಯೋಜಿಸುವಲ್ಲಿ ಲಖ್ಬೀರ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದ. ಆ. 16 ರಂದು ಅಮೃತಸರದ ತನ್ನ ನಿವಾಸದ ಹೊರಗೆ ನಿಲ್ಲಿಸಿದ್ದ ಸಬ್ ಇನ್‌ಸ್ಪೆಕ್ಟರ್‌ ದಿಲ್ಬಾಗ್ ಸಿಂಗ್ ಅವರ ಕಾರಿನ ಕೆಳಗೆ ಸುಧಾರಿತ ಸ್ಫೋಟಕ ಸಾಧನ ಅಳವಡಿಸಿದ್ದ.

ADVERTISEMENT

ಲಖ್ಬೀರ್ ಸಿಂಗ್ ನಿರ್ದೇಶನದ ಮೇರೆಗೆ ಸ್ಫೋಟಕ ಸಾಧನ ಅಳವಡಿಸಿದ್ದ ಯುವರಾಜ್ ಸಬರ್ವಾಲ್ ಅಲಿಯಾಸ್ ಯಶ್ ಅವರನ್ನು ಶುಕ್ರವಾರ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸಬರ್ವಾಲ್ ಬಂಧಿತ ಎಂಟನೇ ಆರೋಪಿ.

ಪೊಲೀಸರ ಪ್ರಕಾರ, ಬಂಧಿತ ಉಗ್ರರನ್ನು ಜೋಗೆವಾಲ್ ಗ್ರಾಮದ ಬಲ್ಜಿತ್ ಸಿಂಗ್ ಮಲ್ಹಿ (25) ಮತ್ತು ಫಿರೋಜ್‌ಪುರದ ಬುಹ್ ಗುಜ್ರಾನ್ ಗ್ರಾಮದ ಗುರ್ಬಕ್ಷ್ ಸಿಂಗ್ ಅಲಿಯಾಸ್ ಗೋರಾ ಸಂಧು ಎಂದು ಗುರುತಿಸಲಾಗಿದೆ.

ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾತನಾಡಿ, ‘ಹೆಚ್ಚುವರಿ ಇನ್‌ಸ್ಪೆಕ್ಟರ್‌ ಜನರಲ್ ಜಲಂಧರ್, ನವಜೋತ್ ಸಿಂಗ್ ಮಹಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿ, ಶಸ್ತ್ರಾಸ್ತಗಳು, 90 ಕಾಟ್ರಿಡ್ಜ್‌ಗಳು, ಎರಡು ಬುಲೆಟ್‌ಗಳ ಜೊತೆಗೆ ಒಂದು ಎಕೆ–56 ಅಸಾಲ್ಟ್ ರೈಫಲ್ ವಶಪಡಿಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.