ADVERTISEMENT

ಉಗ್ರರ ಜಾಲ ಭೇದಿಸಿದ ಪಂಜಾಬ್ ಪೊಲೀಸರು: ಮೂವರ ಬಂಧನ

ಪಿಟಿಐ
Published 8 ಸೆಪ್ಟೆಂಬರ್ 2022, 15:28 IST
Last Updated 8 ಸೆಪ್ಟೆಂಬರ್ 2022, 15:28 IST
   

ಚಂಡೀಗಡ: ಉಗ್ರರ ಜಾಲ ಭೇದಿಸಲಾಗಿದ್ದು, ಕುರುಕ್ಷೇತ್ರದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಹೇಳಿದ್ದಾರೆ.

ಬಂಧಿತರಿಂದ 1.5 ಕೆ.ಜಿ ಯಷ್ಟು ಆರ್‌ಡಿಎಕ್ಸ್ ಇದ್ದ ಸುಧಾರಿತ ಸ್ಫೋಟಕ ಸಾಧನ(ಐಇಡಿ), ಎರಡು ಪಿಸ್ತೂಲ್, 8 ಜೀವಂತ ಕಾಂಟ್ರಿಡ್ಜ್ ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ತಿಂಗಳು ಹರಿಯಾಣ ರಾಜ್ಯದ ಕುರುಕ್ಷೇತ್ರದ ಶಹಬಾದ್ ಪ್ರದೇಶದಲ್ಲಿ ಐಇಡಿ ಇಟ್ಟಿದ್ದ ಆರೋಪಿಯೂ ಬಂಧಿತರಲ್ಲಿ ಒಬ್ಬನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತನನ್ನು ಭಟ್ಟರ್ ಸೆಹ್ಜಾ ಸಿಂಗ್ ಹಳ್ಳಿಯ ನಚ್ಚತಾರ್ ಸಿಂಗ್ ಅಲಿಯಾಸ್ ಮೋತಿ ‌ಎಂದು ಗುರುತಿಸಲಾಗಿದೆ.

ADVERTISEMENT

ಆಗಸ್ಟ್‌ನಲ್ಲಿ ಕುರುಕ್ಷೇತ್ರ ಜಿಲ್ಲೆಯ ಅಂಬಾಲ–ದೆಹಲಿ ರಾಷ್ಟ್ರೀಯ ಹೆದ್ದಾರಿಯ ಶಹಬಾದ್ ಬಳಿ ಅಡಗಿಸಿಡಲಾಗಿದ್ದ 1.3 ಕೆ.ಜಿಯಷ್ಟು ಆರ್‌ಡಿಎಕ್ಸ್ ಇದ್ದ ಐಇಡಿಯನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದಿದ್ದರು.

ಬಂಧಿತ ಇನ್ನಿಬ್ಬರನ್ನು ಗಂದಿವಿಂಡ್ ಹಳ್ಳಿಯ ಸುಖದೇವ್ ಸಿಂಗ್ ಅಲಿಯಾಸ್ ಶೆರಾ, ನೌಶೇರಾದ ಹರ್ಪೀತ್ ಸಿಂಗ್ ಅಲಿಯಾಸ್ ಹ್ಯಾಪಿ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಮೂವರು ಆರೋಪಿಗಳು ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಲಖಬೀರ್ ಸಿಂಗ್ ಅಲಿಯಾಸ್ ಲಂಡಾ ಜೊತೆ ನೇರ ಸಂಪರ್ಕದಲ್ಲಿದ್ದರು. ಸುಲಿಗೆ ಮತ್ತು ಗಡಿಯಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಭಾರಿ ಪ್ರಮಾಣದ ಮಾದಕ ವಸ್ತು ಅಕ್ರಮ ಸಾಗಣೆಯಲ್ಲಿ ತೊಡಗಿದ್ದರು ಎಂಬುದು ತಿಳಿದುಬಂದಿರುವುದಾಗಿ ಡಿಜಿಪಿ ಹೇಳಿದ್ದಾರೆ.

ಬಂಧಿತರು, ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಹರ್ವಿಂದರ್ ಸಿಂಗ್ ರಿಂಡಾನ ಆಪ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.