ADVERTISEMENT

ನನ್ನ ಬಂಧನದ ಸುದ್ದಿ ಸುಳ್ಳು: ಸಂದರ್ಶನದಲ್ಲಿ ಗೋಲ್ಡಿ ಬ್ರಾರ್‌ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2022, 4:33 IST
Last Updated 6 ಡಿಸೆಂಬರ್ 2022, 4:33 IST
   

ಚಂಡೀಗಢ: ತನ್ನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆಂಬುದು ಸುಳ್ಳು. ನಾನು ಅಮೆರಿಕದಲ್ಲಿ ಕೂಡ ಇಲ್ಲ ಎಂದು ಸಿಧು ಮೂಸೆವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್‌ ಯೂಟ್ಯೂಬ್‌ ಸಂದರ್ಶನದಲ್ಲಿ ಹೇಳಿದ್ದಾನೆ ಎಂದು ದಿ ಟ್ರಿಬ್ಯೂನ್‌ ವರದಿ ಮಾಡಿದೆ.


ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದರು. ಅದರ ಬೆನ್ನಲ್ಲೇ

ಯೂಟ್ಯೂಬ್‌ವೊಂದಕ್ಕೆ ಉದ್ದೇಶಿತ ಸಂದರ್ಶನ ನೀಡಿರುವ ಗೋಲ್ಡಿ, ಮುಖ್ಯಮಂತ್ರಿಗಳು ಹೇಳಿರುವುದು ಸುಳ್ಳು. ನಾನು ಅಮೆರಿಕದಲ್ಲಿ ಇಲ್ಲ, ಆದ್ದರಿಂದ ಬಂಧನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾನೆ. ಪತ್ರಕರ್ತರೊಬ್ಬರ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೊ ಪೋಸ್ಟ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT


ಲಾರೆನ್ಸ್ ಬಿಶ್ಣೋಯಿ ಗ್ಯಾಂಗ್‌ನ ಸದಸ್ಯನಾಗಿರುವ ಗೋಲ್ಡಿ ಬ್ರಾರ್, 2017ರಿಂದಲೂ ಕೆನಡಾದಲ್ಲಿ ನೆಲೆಸಿದ್ದ. ಇತ್ತೀಚೆಗಷ್ಟೇ ಆತ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದು, ಅಮೆರಿಕದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಬಿತ್ತರಗೊಂಡಿತ್ತು. ಆ ಸುದ್ದಿಯನ್ನು ಖಚಿತಪಡಿಸಿದ ಪಂಜಾಬ್‌ ಮುಖ್ಯಮಂತ್ರಿ, ಆ ಬಗ್ಗೆ ಅಧಿಕೃತ ಹೇಳಿಕೆಯನ್ನೂ ನೀಡಿದ್ದರು.


‘ಸತ್ಯ ಹೊರಬರಬೇಕಿದೆ. ಗೋಲ್ಡಿ ತನ್ನ ಬಂಧನವಾಗಿಲ್ಲ ಎನ್ನುತ್ತಿರುವುದು ಸತ್ಯವಾದರೆ, ಪಂಜಾಬ್‌ ಮುಖ್ಯಮಂತ್ರಿಗಳು ಹೇಳಿರುವುದು ಸುಳ್ಳು ಎಂದಾಯ್ತು. ಗುಜರಾತ್‌ ಚುನಾವಣೆಗಾಗಿ ಈ ಸುಳ್ಳು ಹೇಳಿರಬಹುದು. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಖಚಿತಪಡಿಸುವ ಮೊದಲೇ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು ಏಕೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಜ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.