ADVERTISEMENT

ಪಂಜಾಬ್‌: ರಾಜ್ಯಪಾಲ, ಸಿ.ಎಂ.ಗೆ ಸುಪ್ರೀಂ ಕೋರ್ಟ್‌ ಚಾಟಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 6:10 IST
Last Updated 1 ಮಾರ್ಚ್ 2023, 6:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಸಾಂವಿಧಾನಿಕ ಹುದ್ದೆ ಯಲ್ಲಿ ಇರುವವರು ಶಿಷ್ಟಾಚಾರಕ್ಕೆ ಅನುಗುಣವಾಗಿ ಹೆಚ್ಚು ಪ್ರಬುದ್ಧತೆಯಿಂದ ವರ್ತಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಮಾರ್ಚ್‌ 3ರಂದು ವಿಧಾನಸಭೆಯ ಬಜೆಟ್‌ ಅಧಿವೇಶನ ಕರೆಯಲು ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಪಂಜಾಬ್‌ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ‘ರಾಜ್ಯಪಾಲರಾದವರು ಸಚಿವ ಸಂಪುಟದ ಸಲಹೆ ಹಾಗೂ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು. ಹಾಗೆಯೇ ರಾಜ್ಯದ ಮುಖ್ಯಮಂತ್ರಿಯಾಗಿರುವವರು ರಾಜ್ಯಪಾಲರು ಕೋರಿದ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು. ಅದು ಅವರ ಆದ್ಯ ಕರ್ತವ್ಯ ಎಂಬುದನ್ನು ಮನಗಾಣಬೇಕು’ ಎಂದು ತಿಳಿಸಿದೆ.

ADVERTISEMENT

ಆ ಮೂಲಕ ನ್ಯಾಯಪೀಠವು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಹಾಗೂ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರ ಮೇಲೆ ಚಾಟಿ ಬೀಸಿದೆ.

‘ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಸಮಚಿತ್ತ ಹಾಗೂ ಪ್ರಬುದ್ಧತೆಯಿಂದ ವರ್ತಿಸಬೇಕು. ಆ ದಿಸೆಯಲ್ಲೇ ಕೆಲಸ ಮಾಡಬೇಕು. ‍ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಹಾಗಂತ ರಾಜಕಾರಣವನ್ನು ಇಷ್ಟೊಂದು ಕೀಳು ಮಟ್ಟಕ್ಕೆ ಕೊಂಡೊಯ್ಯಬಾರದು. ಸಾಂವಿಧಾನಿಕ ಹುದ್ದೆಯಲ್ಲಿರುವವರು ಅಂತಿಮವಾಗಿ ನಾಗರಿಕರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿ ಸಬೇಕು’ ಎಂದು ನ್ಯಾಯಪೀಠ ಹೇಳಿದೆ.

ಪಂಜಾಬ್‌ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ರಾಜ್ಯ ಸರ್ಕಾರವು ಬಜೆಟ್‌ ಅಧಿವೇಶನ ಕರೆಯುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿತ್ತು. ಈ ಸಂಬಂಧ ಅವರಿಗೆ ಪತ್ರವನ್ನೂ ರವಾನಿಸಿತ್ತು. ಅದಕ್ಕೆ ಅವರು ಕಾನೂನಿನ ಸಲಹೆ ಪಡೆಯುವುದಾಗಿ ಹೇಳಿದ್ದಾರೆ. ಇದು ಸರಿಯಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರು ಅಜ್ಞಾನದಿಂದ ವರ್ತಿಸುತ್ತಿದ್ದಾರೆ. ಅವರು ಸಂವಿಧಾನವನ್ನು ‘ಹೈಜಾಕ್‌’ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.

‘ಫೆ. 13ರಂದು ರಾಜ್ಯಪಾಲರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ತಾವು ಪಂಜಾಬ್‌ನಲ್ಲಿ ನೆಲೆಸಿರುವ 3 ಕೋಟಿ ಜನರಿಗಷ್ಟೇ ಉತ್ತರದಾಯಿ ಯಾಗಿರುವುದಾಗಿ ಹೇಳಿದ್ದಾರೆ. ಇದು ಅವರ ಸಂವಹನದ ಮಟ್ಟ ತೋರಿಸುತ್ತದೆ’ ಎಂದು ರಾಜ್ಯಪಾಲರ ಪರ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

‘ಇಬ್ಬರ ಕಡೆಯಿಂದಲೂ ಲೋಪವಾಗಿದೆ.ಸಿ.ಎಂ ಅವರು ಪತ್ರದಲ್ಲಿ ವ್ಯಕ್ತಪಡಿಸಿರುವ ಭಾವನೆ ಒಪ್ಪಲಾಗದು. ಅಧಿವೇಶನ ಕರೆಯದ ಕುರಿತು ರಾಜ್ಯಪಾಲರಿಂದಲೂ ಯಾವುದೇ ಸಮರ್ಥನೆ ಇಲ್ಲ’ ಎಂದು ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.