ADVERTISEMENT

ರಫೇಲ್‌ ಖರೀದಿಯಲ್ಲಿ ಅಕ್ರಮವಿಲ್ಲ: ಕಿಡಿ ಹಚ್ಚಿದ ಡಾಸೋ ಸಿಇಒ, ಸಮರಕ್ಕೆ ಮರುಜೀವ

ಪಿಟಿಐ
Published 13 ನವೆಂಬರ್ 2018, 20:14 IST
Last Updated 13 ನವೆಂಬರ್ 2018, 20:14 IST
.
.   

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಸಲು ಭಾರತ ಮಾಡಿಕೊಂಡಿರುವ ಒಪ್ಪಂದದಲ್ಲಿ ಅಕ್ರಮ ಆಗಿಲ್ಲ ಎಂದು ವಿಮಾನ ತಯಾರಿಕಾ ಸಂಸ್ಥೆ ಡಾಸೋ ಏವಿಯೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎರಿಕ್‌ ಟ್ರಾಪಿಯರ್‌ ಅವರು ಹೇಳುವುದರೊಂದಿಗೆ ಈ ವಿಚಾರದ ರಾಜಕೀಯ ಕೆಸರೆರಚಾಟ ಮರುಜೀವ ಪಡೆದುಕೊಂಡಿದೆ.

ರಫೇಲ್‌ ಪ್ರಕರಣದಲ್ಲಿ ನ್ಯಾಯಬದ್ಧವಾದ ತನಿಖೆ ನಡೆಸಬೇಕು. ಅದರ ಬದಲು ಗಿಣಿಪಾಠದ ಸಂದರ್ಶನಗಳಿಂದ ಯಾವುದೇ ಉಪಯೋಗ ಇಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ಸುಳ್ಳುಗಳ ಸೃಷ್ಟಿಯಿಂದ ರಫೇಲ್‌ ಹಗರಣವನ್ನು ಮುಚ್ಚಿಡಲಾಗದು. ಪರಸ್ಪರ ಫಲಾನುಭವಿಗಳು ಮತ್ತು ಸಹ ಆರೋಪಿಗಳ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ ಎಂಬುದು ಕಾನೂನಿನ ಮೊದಲ ನಿಯಮ. ಎರಡನೇ ನಿಯಮ ಏನೆಂದರೆ, ಫಲಾನುಭವಿಗಳು ಮತ್ತು ಆರೋಪಿಗಳೇ ಪ್ರಕರಣದ ನ್ಯಾಯಾಧೀಶರಾಗುವಂತಿಲ್ಲ. ಸತ್ಯ ಹೊರಬರಲು ದಾರಿ ಇದ್ದೇ ಇದೆ’ ಎಂದು ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಆದರೆ, ರಫೇಲ್‌ ವಿಚಾರದಲ್ಲಿ ಕಾಂಗ್ರೆಸ್‌ ಮೇಲೆ ಕೇಂದ್ರ ಸರ್ಕಾರ ಹರಿಹಾಯ್ದಿದೆ. ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸುಳ್ಳುಗಳನ್ನು ಎರಿಕ್‌ ಅವರ ಹೇಳಿಕೆ ಬಯಲಾಗಿಸಿದೆ. ರಾಹುಲ್‌ ಅವರ ವರ್ತನೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಹೊಣೆಗೇಡಿಯಾಗುತ್ತಿದೆ. ಭಾರತದ ಭದ್ರತಾ ಅಗತ್ಯಗಳನ್ನು ಅವರು ಗಣನೆಗೇ ತೆಗೆದುಕೊಳ್ಳುತ್ತಿಲ್ಲ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ತಿರುಗೇಟು ನೀಡಿದ್ದಾರೆ.

ವಾಯುಪಡೆಯ ಯುದ್ಧ ಸಾಮರ್ಥ್ಯ ಸುಧಾರಣೆಗೆ ರಫೇಲ್‌ ವಿಮಾನ ಖರೀದಿ ಅನಿವಾರ್ಯವಾಗಿತ್ತು. ಆದರೆ ಈ ಖರೀದಿಯನ್ನು ಯುಪಿಎ ಸರ್ಕಾರ ವಿಳಂಬ ಮಾಡಿತು ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಯುಪಿಎ ಅವಧಿಯಲ್ಲಿ ರೂಪಿಸಲಾದ ರಕ್ಷಣಾ ಖರೀದಿ ಪ್ರಕ್ರಿಯೆಯನ್ನು ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಸಂದರ್ಭದಲ್ಲಿ ಸಂಪೂರ್ಣವಾಗಿ ಅನುಸರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಸೋಮವಾರ ಹೇಳಿತ್ತು.

ಆದರೆ, ಪ್ರಕರಣದಲ್ಲಿ ಆಗಿರುವ ತಪ್ಪುಗಳನ್ನು ಕೇಂದ್ರಸರ್ಕಾರ ಪ್ರಮಾಣಪತ್ರದಲ್ಲಿ ಒಪ್ಪಿಕೊಂಡಿದೆ ಎಂದು ರಾಹುಲ್‌ ಹೇಳಿದ್ದಾರೆ. ಯಾವುದೇ ಖರೀದಿ ಸಂದರ್ಭದಲ್ಲಿ ಅನುಸರಿಸಬೇಕಾದ ಮೂಲಭೂತ ನಿಯಮಗಳನ್ನೇ ಪಾಲಿಸಿಲ್ಲ ಎಂದಿದ್ದಾರೆ.

ಎರಿಕ್‌ ಹೇಳಿದ್ದೇನು?

* ರಫೇಲ್‌ ಯುದ್ಧ ವಿಮಾನ ಖರೀದಿಸಲು ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಕ್ಕಿಂತ ಈಗ ಎನ್‌ಡಿಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದದಲ್ಲಿ ವಿಮಾನದ ದರ ಶೇ 9ರಷ್ಟು ಅಗ್ಗವಾಗಿದೆ

* ಒಪ್ಪಂದದ ಜಾರಿಗಾಗಿ ಭಾರತೀಯ ಪಾಲುದಾರ ಸಂಸ್ಥೆಯಾಗಿ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯ ಆಯ್ಕೆ ಡಾಸೋ ಕಂಪನಿಯದ್ದೇ ನಿರ್ಧಾರ

***

* ರಫೇಲ್‌ ಖರೀದಿಯಂತಹ ಸೂಕ್ಷ್ಮ ರಕ್ಷಣಾ ಒಪ್ಪಂದವನ್ನು ವಿವಾದಾತ್ಮಕವಾಗಿಸಲು ಕಾಂಗ್ರೆಸ್‌ ಅಧ್ಯಕ್ಷರು ಸುಳ್ಳಿನ ಮೊರೆ ಹೋಗಿದ್ದಾರೆ. ತಮ್ಮ ವಿಫಲ ರಾಜಕಾರಣದಿಂದಾಗಿ ಇದು ಅವರಿಗೆ ಅನಿವಾರ್ಯವಾಗಿದೆ

ಅರುಣ್‌ ಜೇಟ್ಲಿ,ಕೇಂದ್ರ ಸಚಿವ

* ಕಳ್ಳತನವನ್ನು ಮೋದಿ ಸುಪ್ರೀಂ ನಲ್ಲಿ ಒಪ್ಪಿಕೊಂಡಿದ್ದಾರೆ. ವಾಯುಪಡೆಯನ್ನು ಕೇಳದೆಯೇ ಗುತ್ತಿಗೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದು ಪ್ರಮಾಣಪತ್ರದಲ್ಲಿ ಇದೆ.

ರಾಹುಲ್‌ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.