ADVERTISEMENT

ಸಂಸತ್‌ ಅಂಗಳಕ್ಕೆ ರಫೇಲ್ ಜಟಾಪಟಿ

ಸರ್ಕಾರ, ಕಾನೂನು ಸಚಿವಾಲಯ, ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

ಪಿಟಿಐ
Published 17 ಡಿಸೆಂಬರ್ 2018, 18:17 IST
Last Updated 17 ಡಿಸೆಂಬರ್ 2018, 18:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ರಫೇಲ್ ಜಟಾಪಟಿ ಸೋಮವಾರ ಸಂಸತ್ತಿನ ಅಂಗಳ ಮುಟ್ಟಿದೆ.

‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದರ ಬಗ್ಗೆ ವಿವರಣೆ ನೀಡಿ’ ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಕ್ಕು ಚ್ಯುತಿ ನೋಟಿಸ್ ಹೊರಡಿಸಿದೆ.

ಲೋಕಸಭೆಯಲ್ಲಿ ಬಿಜೆಪಿಯ ಸಂಸದರಾದ ಅನುರಾಗ್ ಠಾಕೂರ್, ನಿಶಿಕಾಂತ್ ದುಬೆ ಮತ್ತು ಸಂಜಯ್ ಜೈಸ್ವಾಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ADVERTISEMENT

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಸರ್ಕಾರದ ವಿರುದ್ಧ ನೋಟಿಸ್ ನೀಡಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೋಟಿಸ್ ನೀಡಿದ್ದಾರೆ.

‘ಪ್ರಮಾಣಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಒಪ್ಪಿಗೆ ನೀಡಿದ್ದು ಕಾನೂನು ಸಚಿವಾಲಯ. ಹೀಗಾಗಿ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನೋಟಿಸ್ ನೀಡಿದ್ದೇನೆ’ ಎಂದು ಖರ್ಗೆ ಮಾಹಿತಿ ನೀಡಿದ್ದಾರೆ.

‘ಈ ಸರ್ಕಾರವು ತಪ್ಪು ಮಾಹಿತಿ ನೀಡಿ ನ್ಯಾಯಾಲಯವನ್ನು ಮತ್ತು ದೇಶದ ಜನರನ್ನು ತಪ್ಪು ದಾರಿಗೆ ಎಳೆದಿದೆ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ’ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ರಾಹುಲ್ ಮಾತು ಕಪೋಲ ಕಲ್ಪಿತ:‘ರಫೇಲ್ ಯುದ್ಧವಿಮಾನಗಳ ಬೆಲೆಗೆ ಸಂಬಂಧಿಸಿದಂತೆ ಜುಲೈನಲ್ಲಿ ಸಂಸತ್ತಿನ ಅಧಿವೇಶನದಲ್ಲಿ ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದರು. ಅವರು ನೀಡಿದ್ದ ಮಾಹಿತಿ ಎಲ್ಲವೂ ಕಪೋಲಕಲ್ಪಿತ. ಅದು ಸಂಸತ್ತಿನ ಹಾದಿತಪ್ಪಿಸುವ ಪ್ರಯತ್ನವಾಗಿತ್ತು. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಜೆಪಿಯ ಸಂಸದರು ತಮ್ಮ ನೋಟಿಸ್‌ನಲ್ಲಿ ಆಗ್ರಹಿಸಿದ್ದಾರೆ.

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 14ರಂದು ವಜಾಮಾಡಿತ್ತು.

‘ಒಪ್ಪಂದದಲ್ಲಿ ಅಕ್ರಮ ನಡೆದಿರುವುದರ ಬಗ್ಗೆ ಯಾವುದೇ ಸುಳಿವುಗಳಿಲ್ಲ. ವಿಮಾನಗಳ ಬೆಲೆಯ ಬಗ್ಗೆ ಮಹಾಲೇಖಪಾಲರ (ಸಿಎಜಿ) ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು (ಪಿಎಸಿ) ಪರಿಶೀಲಿಸಿದೆ ಎಂದು ಸರ್ಕಾರ ಹೇಳಿದೆ’ ಎಂದ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

ಆದರೆ ಈ ಸಮಿತಿಯು ಸಿಎಜಿ ವರದಿಯನ್ನು ಪರಿಶೀಲಿಸಿಲ್ಲ. ಅಲ್ಲದೆ ಈ ಒಪ್ಪಂದಕ್ಕೆ ಸಂಬಂಧಿಸಿದಂತೆಸಿಎಜಿ ಈವರೆಗೆ ವರದಿಯನ್ನೇನೀಡಿಲ್ಲ ಎಂದು ಪಿಎಸಿ ಅಧ್ಯಕ್ಷ ಖರ್ಗೆ ಹೇಳಿದ್ದಾರೆ.

‘ಕೇಂದ್ರವು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ’ ಎಂದುಈ ಅಂಶವನ್ನು ಆಧಾರವಾಗಿಟ್ಟುಕೊಂಡೇ ಕಾಂಗ್ರೆಸ್ ಆರೋಪಿಸುತ್ತಿದೆ.

*
ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ಸುಳ್ಳು ಮಾಹಿತಿ ನೀಡಿದ್ದು ಇದೇ ಮೊದಲು. ಹೀಗಾಗಿ ಈ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಲೇಬೇಕು.
-ಗುಲಾಂ ನಬಿ ಆಜಾದ್, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ

*
ರಫೇಲ್ ಒಪ್ಪಂದದ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮುಂದಿರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿ ಸರ್ಕಾರವು ದೊಡ್ಡ ತಪ್ಪೆಸಗಿದೆ.
-ಆನಂದ್ ಶರ್ಮಾ, ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.