ADVERTISEMENT

ಕಾಶ್ಮೀರದಲ್ಲಿ ರಕ್ತ ಹರಿಯಲಿದೆ ಎಂದಿದ್ದರು ರಾಹುಲ್, ಒಂದೇ ಒಂದು ಗುಂಡು ಸಿಡಿದಿಲ್ಲ

ಕಾಶ್ಮೀರದ ಬಗ್ಗೆ ಅಮಿತ್ ಶಾ

ಏಜೆನ್ಸೀಸ್
Published 17 ಅಕ್ಟೋಬರ್ 2019, 10:11 IST
Last Updated 17 ಅಕ್ಟೋಬರ್ 2019, 10:11 IST
ಅಮಿತ್ ಶಾ
ಅಮಿತ್ ಶಾ   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರುಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಪ್ರಸ್ತಾಪ ಮುಂದಿರಿಸಿದಾಗ ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರೋಧ ಸೂಚಿಸಿ ಪ್ರತಿಭಟನೆ ನಡೆಸಿದ್ದವು. 370ನೇ ವಿಧಿ ರದ್ದು ಮಾಡಿರುವ ನಿರ್ಧಾರವನ್ನು ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ವಿರೋಧಿಸಿದ್ದು ಯಾಕೆ ಎಂಬುದನ್ನು ಅವರು ಮಹಾರಾಷ್ಟ್ರದ ಜನರಿಗೆ ಹೇಳಲಿ ಎಂದಿದ್ದಾರೆ ಗೃಹ ಸಚಿವಅಮಿತ್ ಶಾ.

ಮಹಾರಾಷ್ಟ್ರದ ಸಂಗ್ಲಿ ಜಿಲ್ಲೆಯ ಜಾಟ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಅಮಿತ್ ಶಾ 370ನೇ ವಿಧಿ ರದ್ಧತಿ ವಿರೋಧಿಸಿದ್ದ ಎನ್‌ಸಿಪಿ ಮತ್ತು ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ.

ಈ ಎರಡು ಪಕ್ಷಗಳು ವೋಟ್ ಬ್ಯಾಂಕ್‌ಗಾಗಿ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡುವ ನಿರ್ಧಾರವನ್ನು ವಿರೋಧಿಸಿದ್ದರು. ಕಾಶ್ಮೀರ್ ಮೇ ಖೂನ್ ಕೀ ನದಿಯಾಂ ಬಹ್ ಜಾಯೇಗೀ (ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯಲಿದೆ) ಎಂದಿದ್ದರು ರಾಹುಲ್ ಗಾಂಧಿ. ಆದರೆ ಒಂದೇ ಒಂದು ಗುಂಡು ಹಾರಲಿಲ್ಲ.

ADVERTISEMENT

ಇದನ್ನೂ ಓದಿ:ಕಾಶ್ಮೀರ: ಬಿಬಿಸಿ,ಅಲ್ ಜಜೀರ, ರಾಯಿಟರ್ಸ್‌ನಲ್ಲಿ ತಪ್ಪು ಸುದ್ದಿ ಪ್ರಕಟವಾಗಿತ್ತೇ?

ಪ್ರಧಾನಿಯವರು ಇತ್ತೀಚೆಗೆ ವಿಶ್ವಸಂಸ್ಥೆಗೆ ಭೇಟಿ ಕೊಟ್ಟು ಬಂದಿದ್ದರು. ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಿರ್ಧಾರವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಪಾಕಿಸ್ತಾನ ಮಾತ್ರ ಮೂಲೆಗುಂಪಾಗಿದೆ ಎಂದು ಶಾ ಹೇಳಿದ್ದಾರೆ.

ಮೋದಿಯವರ ನೇತೃತ್ವದ ಸರ್ಕಾರದಲ್ಲಿ ದೇಶದ ಭದ್ರತೆ ಬಲಗೊಂಡಿದೆ.ಇದು ಇಡೀ ಜಗತ್ತಿಗೇ ಗೊತ್ತು. ಒಬ್ಬ ಯೋಧ ಹುತಾತ್ಮನಾದರೆ 10 ಶತ್ರುಗಳ ಹತ್ಯೆಯಾಗುತ್ತದೆ ಎಂದು ಪುಲ್ವಾಮ ಉಗ್ರ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್ ವಾಯುದಾಳಿ ನಡೆದದ್ದನ್ನು ಶಾ ಉಲ್ಲೇಖಿಸಿದ್ದಾರೆ.

1971ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಗೆದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮೊದಲು ಅಭಿನಂದಿಸಿದ್ದು ಅಟಲ್ ಬಿಹಾರಿವಾಜಪೇಯಿ. ನಾವು ಆಗ ವಿಪಕ್ಷದಲ್ಲಿದ್ದೆವು. ಯಾಕೆಂದರೆ ನಮಗೆ ದೇಶ ಮೊದಲು.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ಉಗ್ರರು ಗಡಿಯೊಳಗೆ ನುಗ್ಗಿ ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಿದರು ಎಂದು ಅಮಿತ್ ಶಾ ಹೇಳಿದ್ದಾರೆ.

ಅಕ್ಟೋಬರ್ 21ರಂದು ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದ್ದು ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.