ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಭಾರತದ ವಿದೇಶಾಂಗ ನೀತಿಯು ಅಧಃಪತನಗೊಂಡಿದೆ ಎಂದು ಪುನಃ ಆರೋಪಿಸಿದ್ದಾರೆ.
ಜೈಶಂಕರ್ ಅವರ ಸಂದರ್ಶನದ ತುಣುಕನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ‘ಒಂದೇ ಒಂದು ದೇಶವೂ ಪಾಕಿಸ್ತಾನದ ನಡೆಯನ್ನು ಖಂಡಿಸಲಿಲ್ಲ ಏಕೆ, ಭಾರತ–ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಟ್ರಂಪ್ ಅವರನ್ನು ಆಹ್ವಾನಿಸಿದ್ದು ಯಾರು’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು, ‘ಜೈಶಂಕರ್ ಅವರು ಆಪರೇಷನ್ ಸಿಂಧೂರದ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಿದ್ದರು’ ಎಂದು ಆರೋಪಿಸಿದ್ದರು. ‘ಪ್ರಧಾನಿ ಮೋದಿ ಅವರೇ ಪೊಳ್ಳು ಭಾಷಣವನ್ನು ನಿಲ್ಲಿಸಿ’ ಎಂದು ಗುರುವಾರ ವಾಗ್ದಾಳಿ ನಡೆಸಿದ್ದರು.
ನೀವು ಯಾರ ಕಡೆ ನಿರ್ಧರಿಸಿ: ಬಿಜೆಪಿ
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ‘ರಾಹುಲ್ ಗಾಂಧಿ ಅವರೇ... ನೀವು ಭಾರತದ ವಿರೋಧ ಪಕ್ಷದ ನಾಯಕರೇ ಅಥವಾ ಪಾಕಿಸ್ತಾನದ ‘ನಿಶಾನ್–ಇ–ಪಾಕಿಸ್ತಾನ್’ ಆಗಬೇಕೇ ಎಂದು ನಿರ್ಧರಿಸಿ’ ಎಂದು ಪ್ರಶ್ನಿಸಿದ್ದಾರೆ. ‘ನಿಶಾನ್–ಇ–ಪಾಕಿಸ್ತಾನ’ವು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ರಾಹುಲ್ ಅವರು ‘ಆಪರೇಷನ್ ಸಿಂಧೂರ’ ವಿಚಾರದಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡುವ ಮೂಲಕ ದೇಶದ ಸೇನಾಪಡೆಗಳ ಶೌರ್ಯವನ್ನು ಕುಂದಿಸುತ್ತಿದ್ದಾರೆ ಮತ್ತು ದೇಶದ ಭದ್ರತೆಯನ್ನು ಅಪಾಯಕ್ಕೊಡ್ಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಹುಲ್ ಅವರ ಹೇಳಿಕೆಯನ್ನು ‘ಬಾಲಿಶ ವರ್ತನೆ’ ಎಂದು ಕಡೆಗಣಿಸಲಾಗದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.