
ನವದೆಹಲಿ: ‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಜಾತಿ ಗಣತಿ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸದೆ, ಕಾಲಮಿತಿಯ ಯೋಜನೆ ಮತ್ತು ಸ್ಪಷ್ಟ ಚೌಕಟ್ಟನ್ನು ರೂಪಿಸದೆ ಬಹಿರಂಗವಾಗಿ ದೇಶದ ಬಹುಜನರಿಗೆ ದ್ರೋಹ ಬಗೆಯುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದರು.
ಲೋಕಸಭೆಯಲ್ಲಿ ಮುಂದಿನ ಗಣತಿ ಮತ್ತು ಜಾತಿ ಗಣತಿ ಕುರಿತ ಪ್ರಶ್ನೆಗೆ ಸರ್ಕಾರ ಪ್ರತಿಕ್ರಿಯೆ ನೀಡಿದ ಬಳಿಕ ಅವರು ವಾಗ್ದಾಳಿ ನಡೆಸಿದರು.
‘ಸಂಸತ್ತಿನಲ್ಲಿ ಜಾತಿ ಗಣತಿ ಕುರಿತು ಪ್ರಶ್ನೆಯೊಂದನ್ನು ಕೇಳಿದೆ. ಸರ್ಕಾರದ ಪ್ರತಿಕ್ರಿಯೆ ಕೇಳಿ ಆಘಾತವಾಗಿದೆ. ಸರ್ಕಾರಕ್ಕೆ ಇತರ ರಾಜ್ಯಗಳ ಯಶಸ್ವೀ ಜಾತಿ ಗಣತಿಗಳ ಕಾರ್ಯತಂತ್ರವನ್ನು ಕಲಿತುಕೊಳ್ಳುವ, ಹೊಸದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ’ ಎಂದು ‘ಎಕ್ಸ್’ನಲ್ಲಿ ಹೇಳಿದರು.
ರಾಹುಲ್ ಗಾಂಧಿ ಅವರು ಮಂಗಳವಾರ ಜಾತಿ ಗಣತಿ ಕುರಿತ ವಿವರ, ಪ್ರಶ್ನಾವಳಿ ಸಿದ್ಧತೆ ಮತ್ತು ವೇಳಾಪಟ್ಟಿ ಕುರಿತು ಪ್ರಶ್ನೆಗಳನ್ನು ಕೇಳಿದ್ದರು.
‘ಗಣತಿಯ ಪ್ರಶ್ನೆಗಳ ಕರಡನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮತ್ತು ಜನರಿಂದ ಅಥವಾ ಜನಪ್ರತಿನಿಧಿಗಳಿಂದ ಸಲಹೆಗಳನ್ನು ಪಡೆಯುವ ಉದ್ದೇಶ ಇದೆಯೇ’ ಎಂದೂ ಕೇಳಿದ್ದರು.
ಇದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರಾಯ್ ಅವರು, ‘2027ರ ಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ನಡೆಯಲಿದೆ. ನಂತರ ಎರಡನೇ ಹಂತದಲ್ಲಿ 2027ರ ಫೆಬ್ರುವರಿಯಲ್ಲಿ ಜನಸಂಖ್ಯೆಯ ದಾಖಲಾತಿ ನಡೆಸಲಾಗುತ್ತದೆ’ ಎಂದು ತಿಳಿಸಿದ್ದರು.
‘ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆದು ಗಣತಿ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.