
ನವದೆಹಲಿ (ಪಿಟಿಐ): ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ‘ನರೇಗಾ’ವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದೇ ದಿನದಲ್ಲಿ ನಾಶಮಾಡಿದೆ ಎಂದು ಆರೋಪಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ನರೇಗಾ’ಕ್ಕೆ ಪರ್ಯಾಯವಾಗಿ ರೂಪಿಸಿರುವ ‘ವಿಬಿ–ಜಿ ರಾಮ್ ಜಿ’ ಮಸೂದೆ ‘ಗ್ರಾಮ ವಿರೋಧಿ’ಯಾಗಿದೆ ಎಂದು ಆರೋಪಿಸಿದ್ದಾರೆ.
‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆಯು ವಿರೋಧ ಪಕ್ಷಗಳ ತೀವ್ರ ಪ್ರತಿರೋಧದ ನಡುವೆಯೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರವಷ್ಟೇ ಅಂಗೀಕಾರ ಪಡೆದಿದೆ.
ಈ ಕುರಿತು ಶುಕ್ರವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಬೇಡಿಕೆ ಮತ್ತು ಹಕ್ಕು ಆಧಾರಿತ ಖಾತರಿ ಯೋಜನೆಯನ್ನು ಮೋದಿ ಸರ್ಕಾರ ನಾಶ ಮಾಡಿದೆ. ಈ ಯೋಜನೆಯನ್ನು ದೆಹಲಿಯಿಂದ ನಿಯಂತ್ರಿಸುವ ಪಡಿತರ ಯೋಜನೆಯಾಗಿ ಪರಿವರ್ತಿಸುತ್ತಿದೆ. ಇದು ದೇಶ ವಿರೋಧಿ ಮತ್ತು ಗ್ರಾಮ ವಿರೋಧಿಯಾಗಿದೆ’ ಎಂದು ಕಿಡಿಕಾರಿದ್ದಾರೆ.
‘ನರೇಗಾ ಯೋಜನೆಯು ಗ್ರಾಮೀಣ ಜನರಿಗೆ ಆರ್ಥಿಕ ಶಕ್ತಿಯನ್ನು ನೀಡಿತ್ತು. ಶೋಷಣೆ, ಸಂಕಷ್ಟ ಮತ್ತು ವಲಸೆಯನ್ನು ಕಡಿಮೆಗೊಳಿಸಿತ್ತು. ಮೂಲಸೌಕರ್ಯ ವೃದ್ಧಿಗೂ ನೆರವಾಗಿತ್ತು. ಇದೀಗ ಕೇಂದ್ರ ಸರ್ಕಾರ ಇದನ್ನೆಲ್ಲ ಮುರಿಯಲು ಮುಂದಾಗಿದೆ’ ಎಂದು ದೂರಿದ್ದಾರೆ.
‘ಕಾರ್ಮಿಕ, ಬಡವರ ವಿರೋಧಿ’:
ಕೆಲಸಕ್ಕೆ ಮಿತಿ ಹೇರುವ ಮತ್ತು ಕೆಲಸವನ್ನು ನಿರಾಕರಿಸಲು ಹಲವು ಮಾರ್ಗಗಳನ್ನು ಸೃಷ್ಟಿಸುವ ಮೂಲಕ ‘ವಿಬಿ–ಜಿ ರಾಮ್ ಜಿ’ ಮಸೂದೆಯು ಗ್ರಾಮೀಣ ಬಡವರನ್ನು ದುರ್ಬಲಗೊಳಿಸುತ್ತದೆ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ ಸಮಯದಲ್ಲಿ ನರೇಗಾ ಹೇಗೆಲ್ಲ ಜನರಿಗೆ ಉಪಯುಕ್ತವಾಯಿತು ಎಂಬುದನ್ನು ಕಂಡಿದ್ದೇವೆ. ಆರ್ಥಿಕತೆ ಸ್ಥಗಿತಗೊಂಡು ಜೀವನೋಪಾಯ ಕುಸಿದಿದ್ದಾಗ, ಕೋಟ್ಯಂತರ ಜನರ ಹಸಿವು ನೀಗಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ನೆರವಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಈ ಮಸೂದೆಯನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಜ್ಞರ ಪರಿಶೀಲನೆ ಅಗತ್ಯ:
‘ಮಸೂದೆಯನ್ನು ಸ್ಥಾಯಿ ಸಮಿತಿಯ ಪರಿಶೀಲನೆ, ತಜ್ಞರ ಸಮಾಲೋಚನೆ, ಸಾರ್ವಜನಿಕರ ಸಲಹೆ, ಸೂಚನೆ, ಮಾರ್ಗದರ್ಶನಗಳಿಲ್ಲದೆ ಎಂದಿಗೂ ಜಾರಿಗೆ ತರಬಾರದು’ ಎಂದು ಅವರು ಪ್ರತಿಪಾದಿಸಿದ್ದಾರೆ.
‘ನರೇಗಾ ನಾಶಪಡಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಯತ್ನ ಯಶಸ್ವಿಯಾಗಲು ಬಿಡುವುದಿಲ್ಲ. ಕೇಂದ್ರದ ಈ ಕ್ರಮದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟಗಳನ್ನು ರೂಪಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಆವರಣದಲ್ಲಿ ಅಹೋರಾತ್ರಿ ಧರಣಿ
ನವದೆಹಲಿ (ಪಿಟಿಐ): ‘ನರೇಗಾ’ಕ್ಕೆ ಪರ್ಯಾಯವಾಗಿ ತಂದಿರುವ ‘ವಿಬಿ–ಜಿ ರಾಮ್ ಜಿ’ ಮಸೂದೆ ವಿರೋಧಿಸಿ ವಿರೋಧ ಪಕ್ಷಗಳ ನಾಯಕರು ಸಂಸತ್ತಿನ ಆವರಣದಲ್ಲಿ ಗುರುವಾರ ಅಹೋರಾತ್ರಿ ಧರಣಿ ನಡೆಸಿದರು. ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್ ಡಿಎಂಕೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಈ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಬೀದಿಗಿಳಿದು ಹೋರಾಡುವುದಾಗಿ ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ‘ಕೇಂದ್ರ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ್ದೇವೆ’ ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ ‘ಈ ಮಸೂದೆ ಅಂಗೀಕಾರವು ದೇಶದ ಕಾರ್ಮಿಕರಿಗೆ ಅತ್ಯಂತ ದುಃಖ ತರಿಸಿದೆ. ನರೇಗಾ ಅನ್ನು ರದ್ದುಗೊಳಿಸುವ ಮೂಲಕ ಬಿಜೆಪಿಯು ದೇಶದ 12 ಕೋಟಿ ಜನರ ಜೀವನೋಪಾಯದ ಮೇಲೆ ದಾಳಿ ಮಾಡಿದೆ’ ಎಂದು ಕಿಡಿಕಾರಿದರು.
‘ಸಂಕ್ಷಿಪ್ತಾಕ್ಷರ ತೇಲಿಬಿಡುವ ವ್ಯಾಧಿ’
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂಕ್ಷಿಪ್ತಾಕ್ಷರಗಳನ್ನು ತೇಲಿಬಿಡುವ ವ್ಯಾಧಿಯಿಂದ ಬಳಲುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹ) ಜೈರಾಮ್ ರಮೇಶ್ ಆರೋಪಿಸಿದ್ದಾರೆ. ನರೇಗಾಕ್ಕೆ ಪರ್ಯಾಯವಾಗಿ ಕೇಂದ್ರ ಸರ್ಕಾರ ತಂದ ‘ವಿಬಿ–ಜಿ ರಾಮ್ ಜಿ’ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಪಡೆದ ಮರು ದಿನವಾದ ಶುಕ್ರವಾರ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಮೋದಿ ಅವರ ಬಳಿ A.C.R.O.N.Y.M ಸಚಿವಾಲಯ ಅಂದರೆ ಹಳೆಯ ಯೋಜನೆಗಳ ಮರುನಾಮಕರಣ ಮಾಡುವ ಆಡಳಿತದ ಆಯೋಗ ಇದೆ. ಅದು ಹಳೆ ಯೋಜನೆ ಕಾರ್ಯಕ್ರಮಗಳ ಹೆಸರನ್ನು ಬದಲಿಸುವ ಕಾರ್ಯವನ್ನು ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
- ಚಳಿಗಾಲದ ಅಧಿವೇಶನ ಅಂತ್ಯ
ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನವು ಶುಕ್ರವಾರ ಅಂತ್ಯಗೊಂಡಿದ್ದು ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ‘ವಿಬಿ– ಜಿ ರಾಮ್ ಜಿ’ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆ ಸೇರಿದಂತೆ ಪ್ರಮುಖ ಮಸೂದೆಗಳು ಅಂಗೀಕಾರ ಪಡೆದವು. ‘ವಂದೇ ಮಾತರಂ’ನ 150ನೇ ವರ್ಷಾಚರಣೆ ಸಂದರ್ಭದಲ್ಲಿ ಉಭಯ ಸದನಗಳಲ್ಲಿ ತೀವ್ರ ಚರ್ಚೆ ನಡೆಯಿತು. ಚುನಾವಣಾ ಸುಧಾರಣೆ ಕುರಿತು ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ವಾಕ್ಸಮರ ನಡೆಯಿತು. ಉನ್ನತ ಶಿಕ್ಷಣವನ್ನು ಒಂದೇ ಸಂಸ್ಥೆಯ ವ್ಯಾಪ್ತಿಯಡಿ ತರುವ ಉದ್ದೇಶ ಹೊಂದಿರುವ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025’ ಅನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು.
ಟ್ಯಾಗೋರ್ ಗಾಂಧಿಗೆ ಅವಮಾನ: ಕಾಂಗ್ರೆಸ್
ನವದೆಹಲಿ (ಪಿಟಿಐ): ‘ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸುವ ಮೂಲಕ ಅಧಿವೇಶನ ಆರಂಭಿಸಿದ ಸರ್ಕಾರವು ಮಹಾತ್ಮ ಗಾಂಧಿ ಅವರನ್ನು ಅಪಮಾನಗೊಳಿಸುವ ಮೂಲಕ ಅಧಿವೇಶನ ಅಂತ್ಯಗೊಳಿಸಿತು’ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ರವೀಂದ್ರನಾಥ ಟ್ಯಾಗೋರ್ ಜವಾಹರಲಾಲ್ ನೆಹರೂ ಅವರನ್ನು ಅವಮಾನಿಸುವ ಮತ್ತು ಇತಿಹಾಸವನ್ನು ತಿರುಚುವ ಉದ್ದೇಶದಿಂದ ‘ವಂದೇ ಮಾತರಂ’ ಕುರಿತು ಚರ್ಚೆ ಆರಂಭಿಸಿದ ಸರ್ಕಾರ ಅಧಿವೇಶನದ ಕೊನೆಯಲ್ಲಿ ‘ವಿಬಿ– ಜಿ ರಾಮ್ ಜಿ’ ಮಸೂದೆ ಮೂಲಕ ಮಹಾತ್ಮ ಗಾಂಧಿ ಅವರಿಗೆ ಅಪಮಾನ ಮಾಡಿತು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ವಿಪ್ ಆಗಿರುವ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ದೂರಿದರು. ‘ವಿಬಿ–ಜಿ ರಾಮ್ ಜಿ’ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿತು. ದೆಹಲಿ ವಾಯುಮಾಲಿನ್ಯ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ಧವಾಗಿತ್ತು. ಆದರೆ ಸರ್ಕಾರ ಚರ್ಚಿಸದೆ ಪಲಾಯನ ಮಾಡಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.