ADVERTISEMENT

ತಾರತಮ್ಯ ನಿವಾರಣಾ ಕಾಯ್ದೆ ಇಂದಿನ ಅಗತ್ಯ: ರಾಹುಲ್‌ ಗಾಂಧಿ

ಪಿಟಿಐ
Published 17 ಜನವರಿ 2026, 14:53 IST
Last Updated 17 ಜನವರಿ 2026, 14:53 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಭಾರತದಲ್ಲಿ ಶಾಲಾ ಪ್ರವೇಶದ ವೇಳೆ ಈಗಲೂ ಜಾತಿಯೇ ಪ್ರಮುಖ ನಮೂನೆ ಆಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ ದಲಿತ ಯುವ ಸಮುದಾಯಗಳ ವಾಸ್ತವ ಸ್ಥಿತಿ ಬದಲಾಗಿಲ್ಲ. ಸದ್ಯ ದೇಶಕ್ಕೆ ಜಾತಿ ತಾರತಮ್ಯ ನಿವಾರಣಾ ಕಾಯ್ದೆಯ(ರೋಹಿತ್ ವೇಮುಲ ಕಾಯ್ದೆ) ಅಗತ್ಯವಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಅವರ 10ನೇ ವರ್ಷದ ಸ್ಮರಣೆ ಅಂಗವಾಗಿ ರಾಹುಲ್‌ ಗಾಂಧಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ರೋಹಿತ್‌ ವೇಮುಲ ನಮ್ಮನಗಲಿ 10 ವರ್ಷ ಕಳೆದಿವೆ. ಆದರೆ ಅವರು ಅಂದು ‘ಈ ದೇಶದಲ್ಲಿ ಎಲ್ಲರೂ ಕನಸು ಕಾಣಲು ಸಮಾನ ಹಕ್ಕು ಹೊಂದಿದ್ದಾರೆಯೇ?’ ಎಂದು ಕೇಳಿದ್ದ ಪ್ರಶ್ನೆ ನಮ್ಮ ಹೃದಯದಲ್ಲಿ ಇವತ್ತಿಗೂ ಪ್ರತಿಧ್ವನಿಸುತ್ತಿದೆ’ ಎಂದಿದ್ದಾರೆ.

ADVERTISEMENT

ಹೈದರಾಬಾದ್ ವಿಶ್ವ ವಿದ್ಯಾಲಯದ 26 ವರ್ಷದ ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಅವರು 2016ರ ಜನವರಿ 17ರಂದು ಕಿರುಕುಳ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. 

‘ಈ ದೇಶವನ್ನು ಉತ್ತಮ ಸ್ಥಿತಿಯಲ್ಲಿಡಲು ವೇಮುಲ ಬಯಸಿದ್ದರು. ಆದರೆ ದಲಿತನೊಬ್ಬನ ಬೆಳವಣಿಗೆಯನ್ನು ಈ ವ್ಯವಸ್ಥೆ ಸಹಿಸಿಕೊಳ್ಳಲಿಲ್ಲ’ ಎಂದು ರಾಹುಲ್‌ ವಿಷಾದ ವ್ಯಕ್ತಪಡಿಸಿದ್ದಾರೆ.

'ಇಂದು ದಲಿತ ಯುವಕರ ವಾಸ್ತವ ಸ್ಥಿತಿ ಬದಲಾಗಿದೆಯೇ? ಶಿಕ್ಷಣ ಸಂಸ್ಥೆಗಳಲ್ಲಿ ಅದೇ ನಿಂದನೆ, ಹಾಸ್ಟೆಲ್‌ಗಳಲ್ಲಿ ಅದೇ ಪ್ರತ್ಯೇಕತೆ, ತರಗತಿಗಳಲ್ಲಿ ಅದೇ ಕೀಳರಿಮೆ, ಅದೇ ಹಿಂಸೆ, ಕೆಲವೊಮ್ಮೆ ಅಂಥದ್ದೇ ಸಾವು ಕಾಣುತ್ತಿದ್ದೇವೆ. ದೇಶದಲ್ಲಿ ಇಂದಿಗೂ ಜಾತಿಯೇ ದೊಡ್ಡ ಪ್ರವೇಶ ಪತ್ರವಾಗಿರುವುದು ಇದಕ್ಕೆ ಕಾರಣ’ ಎಂದರು.

ಈ ಕಾರಣಕ್ಕಾಗಿಯೇ ರೋಹಿತ್ ವೇಮುಲ ಕಾಯ್ದೆ (ತಾರತಮ್ಯ ನಿವಾರಣಾ ಕಾಯ್ದೆ– ಜಾತಿ ಹಾಗೂ ಗುರುತು ಆಧಾರಿತ ತಾರತಮ್ಯ ನಿರ್ಬಂಧ) ಅಗತ್ಯವಿದೆ. ಇದು ಘೋಷಣೆಯಲ್ಲ, ಇವತ್ತಿನ ಜರೂರು ಎಂದು ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ.

ಕರ್ನಾಟಕ, ತೆಲಂಗಾಣದಲ್ಲಿ ಶೀಘ್ರ ಜಾರಿ
‘ದಲಿತ ಯುವಕರೇ ಧ್ವನಿ ಎತ್ತಿ ಸಂಘಟಿತರಾಗಿ ರೋಹಿತ್ ವೇಮುಲ ಕಾಯ್ದೆ ಜಾರಿಗೆ ಒತ್ತಾಯಿಸಿ’ ಎಂದು ಕರೆ ನೀಡಿದ ರಾಹುಲ್‌ ಗಾಂಧಿ ಅವರು ‘ ಕರ್ನಾಟಕ, ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳು ಶೀಘ್ರವೇ ಕಾಯ್ದೆಯನ್ನು ಜಾರಿಗೆ ತರಲಿವೆ’ ಎಂದು ಹೇಳಿದರು. ‘ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವು ಅಪರಾಧ ಎಂದು ಪರಿಗಣಿತವಾದರೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬಹುದು. ಯಾವುದೇ ವಿದ್ಯಾರ್ಥಿಯನ್ನು ಜಾತಿ ಆಧರಿಸಿ ನಿಂದಿಸುವುದು ಕೊನೆಗೊಳ್ಳುತ್ತದೆ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

ಹೈದರಾಬಾದ್‌: ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡು ಶನಿವಾರಕ್ಕೆ (ಜ.17) 10 ವರ್ಷವಾಗಿದ್ದು, ಇದಕ್ಕಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ, ಕ್ಯಾಂಪಸ್‌ನಲ್ಲಿ ಮೆರವಣಿಗೆ ನಡೆಸಿದರು. ಬಳಿಕ, ಕ್ಯಾಂಪಸ್‌ನ ‘ವೆಲಿವಾಡಾ’ದಲ್ಲಿ ಸೇರಿದರು. ‘ಇಷ್ಟು ವರ್ಷಗಳಾದರೂ ವೇಮುಲ ಅವರಿಗೆ ನ್ಯಾಯ ದೊರಕಿಲ್ಲ’ ಎಂದು ವಿ.ವಿಯ ಅಂಬೇಡ್ಕರ್‌ ವಿದ್ಯಾರ್ಥಿಗಳ ಸಂಘಟನೆಯ ಉಪಾಧ್ಯಕ್ಷ ದುಷ್ಯಂತ್‌ ಹೇಳಿದರು.

ಈ ವೇಳೆ, ರೋಹಿತ್‌ ಅವರ ತಾಯಿ ರಾಧಿಕಾ ವೇಮುಲ, ಕಾಂಗ್ರೆಸ್‌ ಶಾಸಕ ಗುಜರಾತ್‌ನ ಜಿಗ್ನೇಶ್‌ ಮೆವಾನಿ ಮತ್ತು ವಿದ್ಯಾರ್ಥಿಗಳು ವೆಲಿವಾಡಾದಲ್ಲಿರುವ ರೋಹಿತ್‌ ಅವರ ಪುತ್ಥಳಿಗೆ ಹಾರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.