ADVERTISEMENT

ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ: ರಾಷ್ಟ್ರಪತಿ ಭೇಟಿಗೆ ‘ಕೈ’ ನಿರ್ಧಾರ

ದೇಶದಾದ್ಯಂತ ಪ್ರತಿಭಟನೆ; ಸ್ಪೀಕರ್, ಸಭಾಧ್ಯಕ್ಷರಿಗೆ ಕಾಂಗ್ರೆಸ್ ದೂರು

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 1:43 IST
Last Updated 17 ಜೂನ್ 2022, 1:43 IST
ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಕೇಂದ್ರದ‌ ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರಾಜಭವನ ಮುತ್ತಿಗೆಗೆ ಹೊರಟಿದ್ದ ಕಾಂಗ್ರೆಸ್ ನ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್. ಸಿ. ಮಹದೇವಪ್ಪ, ಶಾಸಕ ಯತಿಂದ್ರ ಸಿದ್ದರಾಮಯ್ಯ, ಮತ್ತು ಕಾರ್ಯಕರ್ತರು ಗುರುವಾರ ಬೆಂಗಳೂರಿನ ಕ್ವೀನ್ಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಕೇಂದ್ರದ‌ ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರಾಜಭವನ ಮುತ್ತಿಗೆಗೆ ಹೊರಟಿದ್ದ ಕಾಂಗ್ರೆಸ್ ನ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್. ಸಿ. ಮಹದೇವಪ್ಪ, ಶಾಸಕ ಯತಿಂದ್ರ ಸಿದ್ದರಾಮಯ್ಯ, ಮತ್ತು ಕಾರ್ಯಕರ್ತರು ಗುರುವಾರ ಬೆಂಗಳೂರಿನ ಕ್ವೀನ್ಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ಪ್ರತಿಭಟನೆ ನಡೆಸಿದ ಪಕ್ಷದ ಸಂಸದರು ಹಾಗೂ ಕಾರ್ಯಕರ್ತರ ವಿರುದ್ಧ ‘ರಾಜಕೀಯ ದೌರ್ಜನ್ಯ’ ಎಸಗಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ವಿಚಾರವನ್ನು ರಾಷ್ಟ್ರಪತಿ ಅವರ ಗಮನಕ್ಕೆ ತರಲು ನಿರ್ಧರಿಸಿದೆ. ರಾಮನಾಥ ಕೋವಿಂದ್ ಅವರನ್ನು ಶುಕ್ರವಾರ ಭೇಟಿಯಾಗಿ, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ದೂರು ದಾಖಲಿಸಲು ಪಕ್ಷ ನಿರ್ಧರಿಸಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋಮವಾರ, ಮಂಗಳವಾರ ಮತ್ತು ಬುಧವಾರ ಇ.ಡಿ. ವಿಚಾರಣೆ ಎದುರಿಸಿದ್ದ ರಾಹುಲ್ ಗಾಂಧಿ ಅವರು ಗುರುವಾರದ ವಿಚಾರಣೆಯಿಂದ ವಿನಾಯಿತಿ ಪಡೆದಿದ್ದರು. ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ, ಸೋಮವಾರದವರೆಗೆ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಅವರು ಕೋರಿದ್ದಾರೆ.

ರಾಹುಲ್ ಅವರ ವಿಚಾರಣೆಯನ್ನು ಖಂಡಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್, ದೇಶದ ಬಹುತೇಕ ಕಡೆ ಗುರುವಾರ ರಾಜಭವನ ಚಲೋ ನಡೆಸಿತು. ಹೈದರಾಬಾದ್‌ನಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿತು. ಕೈರತಾಬಾದ್‌ನಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಯಿತು.

ADVERTISEMENT

ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದರು. ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ ಅವರು ಪೊಲೀಸ್ ಸಿಬ್ಬಂದಿಯಬ್ಬರ ಕೊರಳಪಟ್ಟಿ ಹಿಡಿದು ಪ್ರತಿಭಟಿಸಿದರು.ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ
ನಡೆಸಿದರು.

ಕಾಂಗ್ರೆಸ್ ದೂರು: ಕಾಂಗ್ರೆಸ್ ಸಂಸದರ ನಿಯೋಗವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭೆ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರನ್ನು ಗುರುವಾರ ಭೇಟಿ ಮಾಡಿತು. ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೊಲೀಸರು ನಡೆಸಿಕೊಂಡ ರೀತಿಯ ಬಗ್ಗೆ ನಿಯೋಗ ಅಸಮಾಧಾನ
ವ್ಯಕ್ತಪಡಿಸಿತು.

ಅಧಿರ್ ರಂಜನ್ ಚೌಧರಿ ನೇತೃತ್ವದ ನಿಯೋಗವು ಬಿರ್ಲಾ ಅವರನ್ನು, ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗವು ನಾಯ್ಡು ಅವರನ್ನು ಭೇಟಿ ಮಾಡಿತು.ಕಾಂಗ್ರೆಸ್ ಸಂಸದರ ಮೇಲೆ ದೆಹಲಿ ಪೊಲೀಸರ ಅನುಚಿತ ವರ್ತನೆ ಹಾಗೂ ದೌರ್ಜನ್ಯವನ್ನು ಪ್ರಬಲವಾಗಿ ವಿರೋಧಿಸುತ್ತೇವೆ ಎಂದು ಬಿರ್ಲಾ ಅವರಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ದೆಹಲಿ ಪೊಲೀಸರು ವರ್ತಿಸಿದ ರೀತಿಯು ನಿಯಮಗಳ ಲಜ್ಜೆಗೆಟ್ಟ ಉಲ್ಲಂಘನೆ ಎಂದು ಆರೋಪಿಸಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಪೊಲೀಸ್ ಕ್ರಮದ ಹಿಂದೆ ಸಂಸದರನ್ನು ಹಿಂಸಿಸುವುದು ಹಾಗೂ ಮಾನಸಿಕವಾಗಿ ಕಿರುಕುಳ ನೀಡುವ ಉದ್ದೇಶವಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.