ನವದೆಹಲಿ: ವಿದೇಶಾಂಗ ನೀತಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಳ್ಳಷ್ಟೂ ತಿಳಿದಿಲ್ಲ. ಆದರೂ ಅದರ ಕುರಿತು ಪ್ರಶ್ನಿಸುವುದನ್ನು ಮಾತ್ರ ಮುಂದುವರೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟೀಯ ವಕ್ತಾರ ಅಜಯ್ ಅಲೋಕ್ ಕಿಡಿಕಾರಿದ್ದಾರೆ.
ಚೀನಾ ಭೇಟಿಯ ವೇಳೆ ಭಾರತ ಮತ್ತು ಚೀನಾದ ನಡುವಿನ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳ್ಳುತ್ತಿರುವ ಕುರಿತು ಷಿ ಜಿನ್‌ಪಿಂಗ್ ಅವರನ್ನು ಜೈಶಂಕರ್ ಅಭಿನಂದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ ಅವರು ‘ವಿದೇಶಾಂಗ ಸಚಿವರು ಭಾರತದ ವಿದೇಶಾಂಗ ನೀತಿಯನ್ನು ನಾಶಮಾಡುವ ಸರ್ಕಸ್ ನಡೆಸುತ್ತಿದ್ದಾರೆ. ಚೀನಾದ ವಿದೇಶಾಂಗ ಸಚಿವರು ಕೂಡ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತಾರೆ ಎಂದು ಊಹಿಸುತ್ತೇನೆ’ ಎಂದಿದ್ದರು.
ಚೀನಾಕ್ಕೆ ಭಾರತೀಯ ವಿದೇಶಾಂಗ ಸಚಿವರು ತೆರಳಿದಾಗ ಅಲ್ಲಿನ ಅಧ್ಯಕ್ಷರು ಹಾಗೂ ವಿದೇಶಾಂಗ ಸಚಿವರನ್ನು ಭೇಟಿಯಾಗದೇ, ಇಟಲಿಯ ಪ್ರಧಾನಿಯನ್ನು ಭೇಟಿ ಮಾಡಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಲಖನೌ ಹೈಕೋರ್ಟ್, ಸೇನೆಯ ವಿರುದ್ದ ಮಾನಹಾನಿ ಹೇಳಿಕೆ ನೀಡಿದ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾಮೀನು ನೀಡಿದೆ. ಅವರು ಭಾರತೀಯ ಸೇನೆಯ ವಿರುದ್ಧ ಸುಳ್ಳು ಹಾಗೂ ಮಾನಹಾನಿ ಹೇಳಿಕೆ ನೀಡುವ ಮೂಲಕ ನಮ್ಮ ಸೇನೆಯನ್ನು ಅವಮಾನಿಸುತ್ತಲೇ ಬಂದಿದ್ದಾರೆ ಎಂದು ಅಜಯ್ ಅಲೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.