ಲಖನೌ(ಉತ್ತರ ಪ್ರದೇಶ): ಭಾರತ್ ಜೋಡೊ ಯಾತ್ರೆ ವೇಳೆ ಸೇನಾಪಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮಾನಹಾನಿ ಪ್ರಕರಣದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಾಧೀಶ ಅಲೋಕ್ ವರ್ಮಾ ಅವರು ರಾಹುಲ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ₹20 ಸಾವಿರ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಒದಗಿಸುವಂತೆ ನ್ಯಾಯಪೀಠ ಆದೇಶಿಸಿದೆ.
ಮುಂದಿನ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ.
ಪ್ರಕರಣವೇನು?
2022ರ ಡಿಸೆಂಬರ್ 16ರಂದು ಭಾರತ್ ಜೋಡೊ ಯಾತ್ರೆಯ ವೇಳೆ ಸೇನೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಿ ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ) ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ 2022ರ ಡಿಸೆಂಬರ್ 9ರಂದು ನಡೆದಿದ್ದ ಸಂಘರ್ಷದ ಕುರಿತು ಮಾಧ್ಯಮವರೊಂದಿಗೆ ಮಾತನಾಡುತ್ತಾ ರಾಹುಲ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ವಿವೇಕ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.