ADVERTISEMENT

ಗೋಡ್ಸೆ–ಮೋದಿ ಸಿದ್ಧಾಂತ ಒಂದೆ: ಸಂಸದ ರಾಹುಲ್‌ಗಾಂಧಿ

ಪೌರತ್ವ ಸಾಬೀತಿಗೆ ಸೂಚಿಸಲು ಮೋದಿ ಯಾರು? ರಾಹುಲ್‌ ಪ್ರಶ್ನೆ

ಪಿಟಿಐ
Published 30 ಜನವರಿ 2020, 20:00 IST
Last Updated 30 ಜನವರಿ 2020, 20:00 IST
ರಾಹುಲ್‌ ಗಾಂಧಿ ನೇತೃತ್ವದಲ್ಲಿ ಗುರುವಾರ ಕೇರಳದಲ್ಲಿ ‘ಸಂವಿಧಾನ ಉಳಿಸಿ’ ಜಾಥಾ ನಡೆಯಿತು –ಪಿಟಿಐ ಚಿತ್ರ
ರಾಹುಲ್‌ ಗಾಂಧಿ ನೇತೃತ್ವದಲ್ಲಿ ಗುರುವಾರ ಕೇರಳದಲ್ಲಿ ‘ಸಂವಿಧಾನ ಉಳಿಸಿ’ ಜಾಥಾ ನಡೆಯಿತು –ಪಿಟಿಐ ಚಿತ್ರ   

ವಯನಾಡ್‌, ಕೇರಳ : ‘ಗಾಂಧೀಜಿ ಕೊಂದ ನಾಥೂರಾಂ ಗೋಡ್ಸೆ ಸಿದ್ಧಾಂತವನ್ನೇ ಪ್ರಧಾನಿ ನರೇಂದ್ರ ಮೋದಿ ಅವರೂ ಹೊಂದಿದ್ದಾರೆ. ಅವರಿಗೆ ಭಾರತದ ಸಾಮರ್ಥ್ಯ ತಿಳಿದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕಲ್ಪೆಟ್ಟಾದಲ್ಲಿ ಗುರುವಾರ ‘ಸಂವಿಧಾನ ಉಳಿಸಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತೀಯರು ತಮ್ಮ ಪೌರತ್ವವನ್ನೇ ಸಾಬೀತುಪಡಿಸಬೇಕಾದ ಸ್ಥಿತಿಯನ್ನು ಮೋದಿ ತಂದಿಟ್ಟಿದ್ದಾರೆ’ ಎಂದು ಟೀಕಿಸಿದರು.

‘ಅರಿವಿನ ಕೊರತೆಯುಳ್ಳ ವ್ಯಕ್ತಿಯೊಬ್ಬರು ಇಂದು ಗಾಂಧಿ ಚಿಂತನೆಯನ್ನೇ ಪ್ರಶ್ನಿಸಲು ಮುಂದಾಗಿದ್ದಾರೆ. ದ್ವೇಷ ಮತ್ತು ಕೋಪವನ್ನೇ ಮನದಲ್ಲಿ ತುಂಬಿಕೊಂಡಿರುವ ಅವರಿಗೆ ದೇಶದ ಸಾಮರ್ಥ್ಯ ಏನೆಂಬುದೇ ತಿಳಿದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ನನಗೆ ಗೋಡ್ಸೆ ಸಿದ್ಧಾಂತದಲ್ಲಿ ನಂಬಿಕೆ ಇದೆ ಎಂದು ಹೇಳುವ ತಾಕತ್ತು ಪ್ರಧಾನಿಗಿಲ್ಲ ಎಂಬುದನ್ನು ಹೊರತುಪಡಿಸಿದರೆ, ಇಬ್ಬರ ಸಿದ್ಧಾಂತದಲ್ಲಿ ವ್ಯತ್ಯಾಸವಿಲ್ಲ’ ಎಂದು ಕುಟುಕಿದರು.

‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉಲ್ಲೇಖಿಸಿದ ಅವರು, ಭಾರತೀಯರಿಗೆ ನೀವು ಭಾರತೀಯರು ಎಂದು ನಿರೂಪಿಸಿ ಎಂದು ಹೇಳಲು ಮೋದಿ ಯಾರು. ಇದಕ್ಕೆ ಅವರಿಗೆ ಅಧಿಕಾರ ಕೊಟ್ಟವರು ಯಾರು?’ ಎಂದರು.

ದ್ವೇಷಮಯ ವಾತಾವರಣ ಬೆಳೆಸುವುದರ ವಿರುದ್ಧ ದೇಶದಲ್ಲಿ ಈಗ ಹೋರಾಟ ನಡೆಯಬೇಕಿದೆ. ಶಾಂತಿ ಯುತವಾಗೇ ಬಿಜೆಪಿಯನ್ನು ಎದುರಿಸಬೇಕು. ನನಗೆ ಪ್ರೀತಿ, ವಿಶ್ವಾಸದ ಮೇಲೆ ನಂಬಿಕೆ ಇದೆ ಎಂದರು.

₹ 2 ಲಕ್ಷದ ಬಾಂಡ್‌, 66 ಜನರಿಗೆ ನೋಟಿಸ್‌

ಕಾನ್ಪುರ, ಉತ್ತರಪ್ರದೇಶ: ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಶಾಂತಿ ಕಾಯ್ದುಕೊಳ್ಳುವುದಾಗಿ ಲಿಖಿತ ವಾಗ್ದಾನ ಮತ್ತು ತಲಾ ₹ 2 ಲಕ್ಷದ ಬಾಂಡ್ ನೀಡಬೇಕು ಎಂದು ಸ್ಥಳೀಯ ಆಡಳಿತ 66 ಜನರಿಗೆ ತಾಕೀತು ಮಾಡಿದೆ.

‘ಸಿಎಎ ವಿರುದ್ಧ ಇಲ್ಲಿನ ಮೊಹಮ್ಮದ್‌ ಅಲಿ ಪಾರ್ಕ್‌ನಲ್ಲಿ ಮಹಿಳೆಯರು ಪ್ರತಿಭಟಿಸುತ್ತಿದ್ದಾರೆ. ನಾವು ಭಾಗಿಯಾಗಿಲ್ಲ ಹಲವರು ಹೇಳಿದರೆ, ಕೆಲವರು ಕುಟುಂಬದ ಮಹಿಳೆಯರು ಪ್ರತಿಭಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್‌ ಅನಿಲ್‌ ಅಗ್ನಿಹೋತ್ರಿ ಅವರು ಕ್ರಿಮಿನಲ್‌ ಅಪರಾಧ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 107/116ರ ಅನ್ವಯ ನೋಟಿಸ್‌ ಜಾರಿ ಮಾಡಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ನೋಟಿಸ್‌ ನೀಡಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

4ನೇ ದಿನಕ್ಕೆ ಪ್ರತಿಭಟನೆ

ಅಲಿಘರ: ಇಲ್ಲಿನ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ಕಾಲೇಜಿನಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಪರೀಕ್ಷೆ ಬಹಿಷ್ಕರಿಸಿರುವ ಸಾವಿರಾರು ವಿದ್ಯಾರ್ಥಿಗಳು ಸಿಬ್ಬಂದಿ ಕಾಲೇಜು ಪ್ರವೇಶಿಸದಂತೆ ಪ್ರವೇಶದ್ವಾರ ಬಂದ್‌ ಮಾಡಿದ್ದಾರೆ.

ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರವೇಶದ್ವಾರವನ್ನು ಒಳಗಿನಿಂದ ಬಂದ್ ಮಾಡಿದ್ದಾರೆ. ಬೋಧಕ ಸಿಬ್ಬಂದಿ ಕಾಲೇಜು ಪ್ರವೇಶಿಸದಂತೆ ನಿರ್ಬಂಧ ಹೇರಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಡಾ.ಕಫೀಲ್‌ ಖಾನ್‌ ಬಂಧನ

ಮುಂಬೈ/ಲಖನೌ: ವಿವಾದಿತ ವೈದ್ಯ, ಉತ್ತರ ಪ್ರದೇಶದ ಡಾ.ಕಫೀಲ್‌ ಖಾನ್‌ ಅವರನ್ನು ಪ್ರಚೋದನಾಕಾರಿ ಹೇಳಿಕೆ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ವೈದ್ಯ ಡಾ.ಕಫೀಲ್‌ ಖಾನ್‌ ಬಂಧನ

ಮುಂಬೈ/ಲಖನೌ: ವಿವಾದಿತ ವೈದ್ಯ, ಉತ್ತರ ಪ್ರದೇಶದ ಡಾ.ಕಫೀಲ್‌ ಖಾನ್‌ ಅವರನ್ನು ಪ್ರಚೋದನಾಕಾರಿ ಹೇಳಿಕೆ ಆರೋಪದ ಮೇಲೆ ಉತ್ತರ ಪ್ರದೇಶ ವಿಶೇಷ ತಂಡದ ಪೊಲೀಸರು ಮುಂಬೈನ ವಿಮಾನನಿಲ್ದಾಣದಲ್ಲಿ ಬಂಧಿಸಿದರು.

ಡಿಸೆಂಬರ್ 2019ರಲ್ಲಿ ಅಲಿಘರ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಎಂಬುದು ಇವರ ವಿರುದ್ಧದ ಆರೋಪ.

ಉತ್ತರ ಪ್ರದೇಶದಲ್ಲಿ 2017ರಲ್ಲಿ ಆಮ್ಲಜನಕ ಕೊರತೆಯಿಂದ 60 ಶಿಶುಗಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಕಫೀಲ್‌ ಅವರನ್ನು ಹಿಂದೆ ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.