
ನವದೆಹಲಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದ್ಯೋಗಿಗಳು, ಸ್ವಪಕ್ಷೀಯರು ಹಾಗೂ ಕುಟುಂಬಸ್ಥರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಇದೇ ಹತಾಶೆಯಿಂದಲೇ ಅವರು ವಿದೇಶಿ ನೆಲದಲ್ಲಿ ನಿಂತು ಭಾರತದ ವಿರುದ್ಧ ಮಾತನಾಡುತ್ತಾ, ಅಪಪ್ರಚಾರಕ್ಕೆ ಮುಂದಾಗಿದ್ದಾರೆ’ ಎಂದು ಬಿಜೆಪಿ ಮಂಗಳವಾರ ಕಿಡಿ ಕಾರಿದೆ.
ಬರ್ಲಿನ್‌ನಲ್ಲಿ ಕಳೆದವಾರ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ವಿಡಿಯೊವನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆಗೊಳಿಸಿತ್ತು. ಇದನ್ನು ಆಕ್ಷೇಪಿಸಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಂಗಳವಾರ ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
‘ರಾಹುಲ್ ಗಾಂಧಿ ಮೇಲೆ ಜನರೂ ವಿಶ್ವಾಸ ಕಳೆದುಕೊಂಡಿದ್ದಾರೆ. ಇಂಡಿಯಾ ಕೂಟದ ಪಾಲುದಾರರು, ಸ್ವಪಕ್ಷದ ನಾಯಕರು ಹಾಗೂ ಸ್ವತಃ ರಾಹುಲ್ ಅವರ ಕುಟುಂಬಸ್ಥರೂ ಅವರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 95 ಚುನಾವಣೆಗಳನ್ನು ಸೋತಿರುವುದು ಇದಕ್ಕೆ ಸಾಕ್ಷಿ’ ಎಂದು ಟೀಕಿಸಿದ್ದಾರೆ.
‘ಇದೇ ಹತಾಶೆಯಲ್ಲಿ ಜಾರ್ಜ್ ಸೋರೊಸ್ (ಅಮೆರಿಕದ ಹೂಡಿಕೆದಾರ) ಅವರ ಮೇಲಿನ ನಿಷ್ಠೆಯೊಂದಿಗೆ ಭಾರತ ಮತ್ತು ಬಿಜೆಪಿ ವಿರುದ್ಧದ ಕೋಪವನ್ನು ಹೊರಹಾಕಲು ರಾಹುಲ್ ಮತ್ತೊಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದರು. ಈ ಮೂಲಕ ಮೋದಿ ಹಾಗೂ ದೇಶದ ಜನತೆಯ ನಿರ್ಣಯದ ವಿರುದ್ಧ ನಿಂತು ಬರ್ಲಿನ್‌ನಲ್ಲಿ ಭಾರತವನ್ನು ಹೀಗೆಳೆದಿದ್ದಾರೆ’ ಎಂದು ಪೂನಾವಾಲಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.