ADVERTISEMENT

ರಾಹುಲ್ ಗಾಂಧಿಯದ್ದು ಪ್ರೀ‌ತಿಯ ಅಂಗಡಿಯಲ್ಲ, ಸುಳ್ಳಿನ ಅಂಗಡಿ: ಶಿವರಾಜ್ ಸಿಂಗ್‌

ಪಿಟಿಐ
Published 11 ಅಕ್ಟೋಬರ್ 2023, 2:40 IST
Last Updated 11 ಅಕ್ಟೋಬರ್ 2023, 2:40 IST
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್   

ಭೋಪಾಲ್: ಪ್ರೀತಿಯ ಅಂಗಡಿ (ಮೊಹಬ್ಬತ್‌ ಕಿ ದುಕಾನ್) ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸುಳ್ಳಿನ ಅಂಗಡಿಯನ್ನು (ಜೂಟ್‌ ಕಿ ದುಕಾನ್‌) ನಡೆಸುತ್ತಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಟೀಕಿಸಿದ್ದಾರೆ.

ಚುನಾವಣೆ ನಿಗದಿಯಾಗಿರುವ ಮಧ್ಯಪ್ರದೇಶದಲ್ಲಿ ‍ರಾಹುಲ್ ಗಾಂಧಿ ಮಾಡುತ್ತಿರುವ ಭಾಷಣಗಳು ಸುಳ್ಳಿನಿಂದ ಕೂಡಿವೆ ಎಂದು ಅವರು ಹೇಳಿದ್ದಾರೆ.

‘ರಾಹುಲ್ ಗಾಂಧಿಯವರು ಪ್ರೀತಿಯ ಅಂಗಡಿ ಬಗ್ಗೆ ಹೇಳುತ್ತಾರೆ. ಆದರೆ ಅವರು ಸುಳ್ಳಿನ ಅಂಗಡಿಯನ್ನು ನಡೆಸುತ್ತಿದ್ದಾರೆ. ಚುನಾವಣಾ ಸಭೆಗಳಲ್ಲಿ ಛತ್ತೀಸಗಢ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮಾಡಿರುವ ಕರಾಳ ಕೆಲಸಗಳನ್ನು ಎಣಿಸುತ್ತಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರು ಕಳೆದ 2 ದಶಕಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂತುಷ್ಟರಾಗಿದ್ದಾರೆ’ ಎಂದು ಚೌಹಾಣ್ ಹೇಳಿದ್ದಾರೆ.

ADVERTISEMENT

2018ರ ಚುನಾವಣೆಯಲ್ಲಿ ಕೃಷಿ ಸಾಲ ಮನ್ನಾ ಮಾಡುವ ಆಶ್ವಾಸನೆಯನ್ನು ರಾಹುಲ್ ಗಾಂಧಿ ನೀಡಿದ್ದರು. ಒಂದು ವೇಳೆ ಸಾಲ ಮನ್ನಾ ಮಾಡದಿದ್ದರೆ 10 ದಿನಗಳಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವುದಾಗಿ ಹೇಳಿದ್ದರು. ಆದರೆ ಅದು ನಡೆದೇ ಇಲ್ಲ ಎಂದು ಚೌಹಾಣ್ ನುಡಿದಿದ್ದಾರೆ.

ಕಾಂಗ್ರೆಸ್‌ ಸರ್ಕಾರದ 15 ತಿಂಗಳ ಅವಧಿಯಲ್ಲಿ ಬೈಗ, ಭರಿಯ ಹಾಗೂ ಶರಿಯಾ ಬುಡಕಟ್ಟು ಜನಾಂಗದ ಮಹಿಳೆಯರಿಗೆ ನೀಡುತ್ತಿದ್ದ ₹ 1 ಸಾವಿರ ಅನುದಾನವನ್ನು ನಿಲ್ಲಿಸಲಾಗಿದೆ. ಇದಾಗ್ಯೂ ಬುಡಕಟ್ಟು ಜನಾಂಗದ ಅಭಿವೃದ್ಧಿ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬುಡಕಟ್ಟು ಮಹಿಳೆಯರ ಹಕ್ಕುಗಳನ್ನು ಕಾಂಗ್ರೆಸ್‌ ಕಸಿದುಕೊಂಡಿದ್ದು ಏಕೆ? ಸಾಲ ಮನ್ನಾ ಮಾಡದೆ ರೈತರನ್ನು ಸಾಲಗಾರರನ್ನಾಗಿ ಮಾಡಿದ್ದೇಕೆ? ಇದಕ್ಕೆ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಚೌಹಾಣ್‌ ಆಗ್ರಹಿಸಿದ್ದಾರೆ.

ನಿರುದ್ಯೋಗಿಗಳಿಗೆ ₹ 4 ಸಾವಿರ ಮಾಸಿಕ ಭತ್ಯೆಯನ್ನೂ ನೀಡುವುದಾಗಿ ಅವರು ಹೇಳಿದ್ದರು. ಈ ಎಲ್ಲಾ ಸುಳ್ಳುಗಳಿಗೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.