ADVERTISEMENT

ಬಿಜೆಪಿ, ಆರ್‌ಎಸ್‌ಎಸ್ ಒಂದೇ ಸಿದ್ಧಾಂತದ ಆಡಳಿತ ಬಯಸುತ್ತವೆ, ಅದು ಅಸಾಧ್ಯ: ರಾಹುಲ್

ಪಿಟಿಐ
Published 3 ಫೆಬ್ರುವರಿ 2022, 12:21 IST
Last Updated 3 ಫೆಬ್ರುವರಿ 2022, 12:21 IST
ರಾಹುಲ್ ಗಾಂಧಿ: ಪಿಟಿಐ ಚಿತ್ರ
ರಾಹುಲ್ ಗಾಂಧಿ: ಪಿಟಿಐ ಚಿತ್ರ   

ರಾಯಪುರ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೇಶದಲ್ಲಿ ಒಂದೇ ಸಿದ್ಧಾಂತದ ಆಡಳಿತವನ್ನು ಬಯಸುತ್ತವೆ. ಆದರೆ, ಅದು ಎಂದಿಗೂ ಸಂಭವಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಗ್ರಾಮೀಣ ಪ್ರದೇಶದ ಭೂರಹಿತ ಕಾರ್ಮಿಕರಿಗಾಗಿ ಛತ್ತೀಸ್‌ಗಢ ಸರ್ಕಾರದ ಆರ್ಥಿಕ ನೆರವು ಯೋಜನೆಗೆ ಚಾಲನೆ ನೀಡಿದ ನಂತರ ಅವರು ಇಲ್ಲಿ ಮಾತನಾಡಿದರು. ಬಿಜೆಪಿ ಪಕ್ಷ ಮತ್ತು ಅದರ ಸಿದ್ಧಾಂತವು ಭಾರತವನ್ನು ಅಪಾಯದತ್ತ ಕೊಂಡೊಯ್ಯುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ದೇಶದ ವಿಭಜನೆಯು ಆ ಪಕ್ಷದ ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದರು. 70 ವರ್ಷಗಳಲ್ಲಿ ಏನು ಮಾಡಲಾಗಿದೆ ಎಂದು ಅವರು ಕೇಳಿದರೆ, ಅದು ಕಾಂಗ್ರೆಸ್‌ಗೆ ಮಾಡಿದ ಅವಮಾನವಲ್ಲ, ನಮ್ಮ ರೈತರು ಮತ್ತು ಕಾರ್ಮಿಕರಿಗೆ ಮಾಡಿದ ಅವಮಾನ ಎಂದು ರಾಹುಲ್ ಗಾಂಧಿ ಹೇಳಿದರು.

ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಡ ರಾಜ್ಯಕ್ಕೆ ಒಂದು ದಿನದ ಭೇಟಿಗಾಗಿ ರಾಜಧಾನಿ ರಾಯಪುರಕ್ಕೆ ಆಗಮಿಸಿದ ರಾಹುಲ್ ಗಾಂಧಿ, 'ರಾಜೀವ್ ಗಾಂಧಿ ಗ್ರಾಮೀಣ ಭೂಮಿ ಹೀನ್‌ ಕೃಷಿ ಮಜ್ದೂರ್ ನ್ಯಾಯ್' ಯೋಜನೆಯನ್ನು ಪ್ರಾರಂಭಿಸುವುದರ ಜೊತೆಗೆ, ಇಲ್ಲಿ ಹುತಾತ್ಮ ಯೋಧರ ಸ್ಮರಣೆಗಾಗಿ ನಿರ್ಮಿಸಲಾಗುತ್ತಿರುವ 'ಛತ್ತೀಸ್‌ಗಢ ಅಮರ್ ಜವಾನ್ ಜ್ಯೋತಿ' ಎಂಬ ಶಾಶ್ವತ ಜ್ವಾಲೆಯ ಸ್ಮಾರಕದ ಅಡಿಪಾಯ ಕಾರ್ಯಕ್ರಮವನ್ನು ನೆರವೇರಿಸಿದರು.

ADVERTISEMENT

ಜೊತೆಗೆ, ಮಹಾರಾಷ್ಟ್ರದ ವಾರ್ಧಾನಲ್ಲಿರುವಂತೆ ನವ ರಾಯಪುರದಲ್ಲಿ ನಿರ್ಮಿಸಲಾಗುತ್ತಿರುವ ‘ಗಾಂಧಿ ಸೇವಾಗ್ರಾಮ’ಆಶ್ರಮಕ್ಕೆ ಅಡಿಪಾಯವನ್ನು ಹಾಕಿದರು.

ಇದಕ್ಕೂ ಮುನ್ನ, ವಿಶೇಷ ವಿಮಾನದ ಮೂಲಕ ನವದೆಹಲಿಯಿಂದ ರಾಯ್ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್, ಅವರ ಸಂಪುಟ ಸಹೋದ್ಯೋಗಿಗಳು, ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.