ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ನವದೆಹಲಿ: ರಾಜಸ್ಥಾನದ ಝಾಲಾವಾಢದಲ್ಲಿ ಸರ್ಕಾರಿ ಶಾಲಾ ಕಟ್ಟಡ ಕುಸಿದು 7 ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವನ್ನು ತರಾಟೆ ತೆಗೆದುಕೊಂಡಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನ್ಯಾಯಯುತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಏಳು ಮಕ್ಕಳು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಅತ್ಯಂತ ದುರಂತ ಹಾಗೂ ಕಳವಳಕಾರಿಯಾಗಿದೆ’ ಎಂದಿದ್ದಾರೆ.
‘ಶಿಥಿಲಗೊಂಡ ಶಾಲೆಗಳ ಬಗ್ಗೆ ಬಂದ ದೂರುಗಳನ್ನು ಸರ್ಕಾರ ನಿರ್ಲಕ್ಷಿಸಿದ್ದರಿಂದ ಈ ಮುಗ್ಧ ಜೀವಗಳು ಬಲಿಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಕ್ಕಳಲ್ಲಿ ಹೆಚ್ಚಿನವರು ಬಹುಜನ ಸಮುದಾಯದವರು. ಅವರ ಜೀವದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಬೆಲೆ ಇಲ್ಲವೇ?’ ಎಂದು ಕಿಡಿಕಾರಿದ್ದಾರೆ.
‘ಈ ಘಟನೆಯ ಬಗ್ಗೆ ನ್ಯಾಯಯುತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ದೆಹಲಿ ಸರ್ಕಾರಿ ಶಾಲೆಯೊಂದು ಸಂಪೂರ್ಣವಾಗಿ ಜಲಾವೃತಗೊಂಡಿರುವುದು, ಜೋಧಪುರದ ಶಾಲೆಯೊಂದು ಸಂಪೂರ್ಣವಾಗಿ ಶಿಥಿಲಗೊಂಡಿರುವುದು ಹೀಗೆ ದೇಶದ ಸರ್ಕಾರಿ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಆದರೆ, ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ’ ಎಂದಿದ್ದಾರೆ.
‘ಸೇತುವೆಗಳು ಕುಸಿತ, ರೈಲು ಅಪಘಾತ, ಹೊಸದಾಗಿ ನಿರ್ಮಿಸಲಾಗದ ರಸ್ತೆಗಳಲ್ಲಿ ಬಿರುಕು, ಮಹಾನ್ ವ್ಯಕ್ತಿಗಳ ಪ್ರತಿಮೆ ನೆಲಕ್ಕುರುಳುವುದು... ಬಿಜೆಪಿ ಆಡಳಿತದಲ್ಲಿ ಇದೆಲ್ಲವೂ ಸಾಮಾನ್ಯವಾಗಿ ಬಿಟ್ಟಿವೆ. ದೇಶದ ಸಂಪತ್ತನ್ನು ಮುಳುಗಿಸಿರುವ ಬಿಜೆಪಿ ನಾಯಕರು ದೇಶ ಅಭಿವೃದ್ಧಿ ಮಾಡಿದ್ದೇವೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ:
ಝಾಲಾವಾಢದ ಪಿಪಲೋದಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾರ್ಥನೆಗೆಂದು ಮಕ್ಕಳು ಸೇರಿದ್ದ ಸಂದರ್ಭದಲ್ಲೇ ಕಟ್ಟಡದ ಒಂದು ಭಾಗ ಕುಸಿದಿದ್ದು, ಮಣ್ಣಿನಡಿಯಲ್ಲಿ ಸಿಲುಕಿ 7 ಮಂದಿ ಮಕ್ಕಳು ಮೃತಪಟ್ಟು, 28 ಮಂದಿ ಗಾಯಗೊಂಡಿದ್ದಾರೆ.
ಶಾಲೆಯ 6 ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಕೊಠಡಿಗಳು ಕುಸಿದು, 35ಕ್ಕೂ ಅಧಿಕ ಮಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡರು. ಕಾಂಕ್ರೀಟ್ ಸ್ಲ್ಯಾಬ್ ಗಳು, ಕಲ್ಲುಗಳನ್ನು ಸ್ಥಳೀಯರು, ಪೋಷಕರು ಹಾಗೂ ಶಿಕ್ಷಕರು ತೆರವು ಗೊಳಿಸಿ, ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯಲು ಅವಿರತ ಶ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.