
ಸುಲ್ತಾನ್‌ಪುರ, ಉತ್ತರಪ್ರದೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಹೇಳಿಕೆಗಾಗಿ ಸಂಬಂಧಿಸಿದಂತೆ 2018ರಲ್ಲಿ ದಾಖಲಾದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಸುಲ್ತಾನ್‌ಪುರದ ಜನಪ್ರತಿನಿಧಿಗಳ (ಸಂಸದರು–ಶಾಸಕರ) ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.
‘ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪಕ್ಷ ಹಾಗೂ ನನ್ನ ವರ್ಚಸ್ಸನ್ನು ಹಾಳುಮಾಡುವ ಗುರಿ ಹೊಂದಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಶುಭಾಂ ವರ್ಮಾ ಮುಂದೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ’ ಎಂದು ಅವರ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಹೇಳಿಕೆ ನೀಡಿದ್ದಾರೆ.
ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಾಕ್ಷ್ಯ ಸಲ್ಲಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಮಾರ್ಚ್ 9ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.
‘ನನ್ನ ಮೇಲಿನ ಆರೋಪವು ಆಧಾರರಹಿತವಾಗಿದೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿಲ್ಲ. ಯಾರಾನ್ನಾದರೂ ದೂಷಿಸುವ ಉದ್ದೇಶದಿಂದ ಅಂತಹ ಭಾಷೆ ಬಳಸಿದ್ದೇನೆಯೇ? ನನ್ನ ಹೇಳಿಕೆಯನ್ನು ತಿರುಚಿ, ಸುಳ್ಳು ದೂರು ದಾಖಲಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ’ ಎಂದು ವಕೀಲ ಶುಕ್ಲಾ ವಿವರಿಸಿದ್ದಾರೆ.
ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹೇಳಿಕೆ ದಾಖಲಿಸಲು ಬಂದ ವೇಳೆ ಅವರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ನೆರೆದಿದ್ದ ಕಾರ್ಯಕರ್ತರತ್ತ ನಗೆಬೀರಿ ಅಲ್ಲಿಂದ ತೆರಳಿದರು.
ನ್ಯಾಯಾಲಯದ ವಿಚಾರಣೆಗೂ ಮುನ್ನ ಸ್ಥಳೀಯ ಕಾಂಗ್ರೆಸ್ ನಾಯಕರು ಸುಲ್ತಾನ್‌ಪುರದ ವೃತ್ತಗಳಲ್ಲಿ ‘ಸತ್ಯಮೇವ ಜಯತೇ’ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.