
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ತಮಿಳು ಜನರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಅವರ ಆರೋಪವು ‘ಅತ್ಯಂತ ನಾಚಿಕೆಗೇಡಿನದ್ದು ಮತ್ತು ಆಧಾರರಹಿತವಾದುದು’ ಎಂದು ಹೇಳಿದೆ.
‘ಭಾರತದ ರಾಜಕಾರಣದಲ್ಲಿ ಪ್ರತ್ಯೇಕತಾವಾದಕ್ಕೆ ಕಾಂಗ್ರೆಸ್ ಸಂಸದ (ರಾಹುಲ್ ಗಾಂಧಿ) ಸ್ಪಷ್ಟ ಉದಾಹರಣೆ. ಪ್ರದೇಶ, ಭಾಷೆ ಮತ್ತು ಜಾತಿ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕೀಯದಿಂದ ದೂರವಿರಿ’ ಎಂದು ರಾಹುಲ್‌ಗಾಂಧಿ ಅವರನ್ನು ಬಿಜೆಪಿ ಆಗ್ರಹಿಸಿದೆ.
ತಮಿಳುನಾಡಿಗೆ ಮಂಗಳವಾರ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು, ‘ಕೇಂದ್ರ ಸರ್ಕಾರ ನಟ ಮತ್ತು ರಾಜಕಾರಣಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆಯುವ ಯತ್ನ ಮಾಡಿದೆ. ಇದು ತಮಿಳು ಸಂಸ್ಕೃತಿಯ ಮೇಲಿನ ದಾಳಿ. ತಮಿಳರ ಧ್ವನಿಯನ್ನು ಅಡಗಿಸುವ ಪ್ರಧಾನಿ ಮೋದಿಯವರ ಯತ್ನ ಫಲಿಸದು’ ಎಂದು ಟೀಕಿಸಿದ್ದರು.
ರಾಹುಲ್ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪವನ್, ‘ರಾಹುಲ್ ಹೇಳಿಕೆ ವಾಸ್ತವ ಮತ್ತು ತರ್ಕಕ್ಕೆ ನಿಲುಕದ್ದು. ಅವರು ಅತ್ಯಂತ ನಾಚಿಕೆಗೇಡಿನ ಮತ್ತು ನೋವುಂಟು ಮಾಡುವ ಮಾತುಗಳನ್ನಾಡಿದ್ದಾರೆ’ ಎಂದರು.
‘ಪ್ರಧಾನಿ ಮೋದಿ ಅವರು ತಮಿಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಕಳೆದ 11 ವರ್ಷಗಳಿಂದ ತೋರುತ್ತಿರುವ ಸಂವೇದನೆ ಅಭೂತಪೂರ್ವವಾದುದು. ಜಾಗತಿಕ ವೇದಿಕೆಗಳಲ್ಲೂ ಅವರು ತಮಿಳಿನ ಅಸ್ಮಿತೆಯನ್ನು ಉತ್ತೇಜಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.