ADVERTISEMENT

ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ರಾಷ್ಟ್ರವ್ಯಾಪಿ ಡಿಜಿಟಲ್‌ ಅಭಿಯಾನ

ಏಜೆನ್ಸೀಸ್
Published 26 ಜುಲೈ 2020, 6:40 IST
Last Updated 26 ಜುಲೈ 2020, 6:40 IST
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ   

ನವದೆಹಲಿ: ಪ್ರಜಾತಾಂತ್ರಿಕ ಮೌಲ್ಯಗಳನ್ನು ನಾಶ ಮಾಡುವ ಪ್ರಯತ್ನಗಳು ಬಿಜೆಪಿಯಿಂದ ನಡೆಯುತ್ತಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭಾನುವಾರ ರಾಷ್ಟ್ರವ್ಯಾಪಿ ಡಿಜಿಟಲ್ ಅಭಿಯಾನವನ್ನು ಹಮ್ಮಿಕೊಂಡಿದೆ. #SpeakUpForDemocracy ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಈ ಅಭಿಯಾನವು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾಹಿತಿ ನೀಡಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳು ಮತ್ತು ಮೌಲ್ಯಗಳ ಮೇಲೆ ಬಿಜೆಪಿಯಿಂದ ನಿರಂತರ ದಾಳಿ ನಡೆಯುತ್ತಿದೆ. ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರಗಳನ್ನು ಉರುಳಿಸಲು ಅದು ಪ್ರಯತ್ನಿಸುತ್ತಿದೆ ಎಂದು ಪಾಂಡೆ ಆರೋಪಿಸಿದ್ದಾರೆ.

ಶನಿವಾರ ರಾತ್ರಿ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶವೊಂದರಲ್ಲಿ, 'ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಉರುಳಿಸಿದೆ. ಅದೇ ರೀತಿಯ ಸಂಚನ್ನು ರಾಜಸ್ಥಾನದಲ್ಲಿಯೂ ರೂಪಿಸುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ADVERTISEMENT

'ರಾಜಸ್ಥಾನದ ಮುಖ್ಯಮಂತ್ರಿ ವಿಧಾನಸಭೆ ಅಧಿವೇಶನವನ್ನು ಕರೆಯುವಂತೆ ರಾಜ್ಯಪಾಲರಿಗೆ ವಿನಂತಿಸಿದ್ದಾರೆ. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಯೊಬ್ಬರ ವಿನಂತಿಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

#SpeakUpForDemocracy ಅಭಿಯಾನದ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌, 'ಪ್ರಜಾಪ್ರಭುತ್ವದ ಅಂತಿಮ ಶಕ್ತಿ ಜನರ ಬಳಿ ಇದೆ. ಜನರು ಕೈಜೋಡಿಸಿ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಬೇಕಾಗಿದೆ. ಇಂದು(ಭಾನುವಾರ) ಬೆಳಿಗ್ಗೆ 10 ಗಂಟೆಗೆ #SpeakUpForDemocracy ಅಭಿಯಾನಕ್ಕೆ ಕೈಜೋಡಿಸಿ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ನಡೆಗಳ ವಿರುದ್ಧ ಧ್ವನಿ ಎತ್ತಿ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.