ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದಿರಾ ಭವನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ 1984ರ ಸಿಖ್ ಹತ್ಯಾಕಾಂಡದ ಪ್ರಮುಖ ಆರೋಪಿ ಜಗದೀಶ್ ಟೈಟ್ಲರ್ ಕೂಡ ಕಾಣಿಸಿಕೊಂಡಿದ್ದಾನೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು ವಾಗ್ದಾಳಿ ನಡೆಸಿದ್ದಾರೆ.
'ರಾಜೀವ್ ಗಾಂಧಿ ಅವರ ಆದೇಶದಂತೆ ಸಿಖ್ ಸಮುದಾಯದವರ ನರಮೇಧ ನಡೆಸಿದ್ದ ವ್ಯಕ್ತಿ ಜಗದೀಶ್ ಟೈಟ್ಲರ್, ಮತ್ತೊಮ್ಮೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಂಡಿದ್ದಾನೆ. ಎಷ್ಟು ಸಮಯ ತೊಳೆದರೂ ಕೆಲವು ಕಲೆಗಳು ಹೋಗುವುದಿಲ್ಲ. ಈ ಗಾಂಧಿ ಕುಟುಂಬದವರೂ ಪಶ್ಚಾತ್ತಾಪ ಪಡುವವರಲ್ಲ' ಎಂದು ಗುಡುಗಿದ್ದಾರೆ.
ದೆಹಲಿ ಸಚಿವ ಮಣಿಂದರ್ ಸಿರ್ಸಾ, '1984ರಲ್ಲಿ ಸಿಖ್ ಸಮುದಾಯದ ಸಾವಿರಾರು ಜನರನ್ನು ಹತ್ಯೆ ಮಾಡಿದ್ದು ಕಳಂಕವಲ್ಲ. ಅದು ಅವರು ಹೆಮ್ಮೆಯಿಂದ ಧರಿಸುವ ಬಿಲ್ಲೆ (ಬ್ಯಾಡ್ಜ್) ಆಗಿದೆ. ಜಗದೀಶ್ ಟೈಟ್ಲರ್ ಜೊತೆ ರಾಹುಲ್ ಗಾಂಧಿ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು, ಹತ್ಯಾಕಾಂಡದ ರೂವಾರಿ ಹೆನ್ರಿಚ್ ಹಿಮ್ಲೆರ್ ಜೊತೆ ಅಡಾಲ್ಫ್ ಹಿಟ್ಲರ್ (ಜರ್ಮನಿ ಸರ್ವಾಧಿಕಾರಿ) ಪೋಸ್ ನೀಡಿದಂತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ರಾಹುಲ್ ಗಾಂಧಿ ಅವರು ಕೆಂಪುಕೋಟೆಯಲ್ಲಿ ನಡೆದ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಗೈರಾದರು. ಆದರೆ, ಟೈಟ್ಲರ್ ಜೊತೆ ನಿಂತಿದ್ದರು' ಎಂದು ಬಿಜೆಪಿಯ ರಾಧಿಕಾ ಖೇರಾ ಆರೋಪಿಸಿದ್ದಾರೆ.
'1984ರ ಸಿಖ್ ನರಮೇಧದ ರೂವಾರಿ ಜಗದೀಶ್ ಟೈಟ್ಲರ್, ಅವರ (ರಾಹುಲ್ ಗಾಂಧಿಯ) ಹಿಂದೆಯೇ ನಿಂತಿದ್ದ. ಹತ್ಯಾಕಾಂಡವನ್ನು 'ಸ್ವಾಭಾವಿಕ' ಎಂದಿದ್ದ ರಾಜೀವ್ ಗಾಂಧಿ (ರಾಹುಲ್ ತಂದೆ), ಟೈಟ್ಲರ್ ರಕ್ತಸಿಕ್ತ ಕೈಗಳನ್ನು ಅವರ ಮರೆಮಾಚಿದ್ದರು. ದೇಶಭಕ್ತಿಯ ದಿನದಂದೂ ಕೂಡ 'ರಾಜಕುಮಾರ' ದಂಗೆಕೋರನ ಜೊತೆ ನಿಂದಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖ. ದೇಶದ ವಿರುದ್ಧ ಸಂಚು ನಡೆಸುವುದು ಮತ್ತು ವಿಶ್ವಾಸಘಾತುಕತನವೇ ಅದರ ಪರಂಪರೆ. ಹೌದು. ರಾಹುಲ್ ಗಾಂಧಿ, ದೇಶದ ವಿರುದ್ಧವೇ ಹೋರಾಟ ಆರಂಭಿಸಿದ ಅದೇ ಇಂದಿರಾ ಭವನವಿದು' ಎಂದು ಪೋಸ್ಟ್ ಮಾಡಿದ್ದಾರೆ.
ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ 1984ರ ಅಕ್ಟೋಬರ್ 31ರಂದು ಹತ್ಯೆ ಮಾಡಿದ್ದರು. ಅದರ ಬೆನ್ನಲ್ಲೇ, ಸಿಖ್ ವಿರೋಧಿ ದಂಗೆಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.