ADVERTISEMENT

ತುರ್ತು ಪರಿಸ್ಥಿತಿ ಕುರಿತ ರಾಹುಲ್ ಗಾಂಧಿ ಹೇಳಿಕೆ ಹಾಸ್ಯಾಸ್ಪದ: ಜಾವಡೇಕರ್

ಪಿಟಿಐ
Published 3 ಮಾರ್ಚ್ 2021, 14:24 IST
Last Updated 3 ಮಾರ್ಚ್ 2021, 14:24 IST
ಪ್ರಕಾಶ್ ಜಾವಡೇಕರ್ (ಸಂಗ್ರಹ ಚಿತ್ರ)
ಪ್ರಕಾಶ್ ಜಾವಡೇಕರ್ (ಸಂಗ್ರಹ ಚಿತ್ರ)   

ನವದೆಹಲಿ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪಕ್ಷವು ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿರಲಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

ರಾಹುಲ್ ಅವರ ಈ ಹೇಳಿಕೆಯು ಹಾಸ್ಯಾಸ್ಪದ. ಕಾಂಗ್ರೆಸ್ ಅಂದು ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಪಡಿಸಿತ್ತು. ಮಾಧ್ಯಮ ಸ್ವಾತಂತ್ರ್ಯ ಕಸಿದುಕೊಂಡಿದ್ದಲ್ಲದೆ ಅಸಮ್ಮತಿ ಸೂಚಿಸಿದವರನ್ನು ಜೈಲಿಗಟ್ಟಿತ್ತು ಎಂದು ಬಿಜೆಪಿ ಹೇಳಿದೆ.

ತುರ್ತು ಪರಿಸ್ಥಿತಿ ಕುರಿತ ಹೇಳಿಕೆ ನೀಡಿದ ಸಂದರ್ಭ ಆರ್‌ಎಸ್‌ಎಸ್‌ ಅನ್ನೂ ರಾಹುಲ್ ಗಾಂಧಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ‘ಸಂಘವನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ಗಾಂಧಿ ಅವರಿಗೆ ದೀರ್ಘ ಸಮಯ ಬೇಕಾಗಬಹುದು. ದೇಶಭಕ್ತಿಯ ವಿಚಾರದಲ್ಲಿ ಆರ್‌ಎಸ್‌ಎಸ್‌ ವಿಶ್ವದಲ್ಲೇ ಅತಿದೊಡ್ಡ ಶಾಲೆಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ರಾಹುಲ್ ಗಾಂಧಿಯವರು ಪಾಕಿಸ್ತಾನದ ಮೂಲಭೂತವಾದಿಗಳ ಜತೆ ಆರ್‌ಎಸ್‌ಎಸ್‌ ಅನ್ನು ತುಲನೆ ಮಾಡಿದ್ದಕ್ಕೆ ಪ್ರತಿಕ್ರಿಯೆ ಕೇಳಿದ ಮಾಧ್ಯಮದವರಿಗೆ ಉತ್ತರಿಸಿದ ಜಾವಡೇಕರ್, ‘ಜನರಲ್ಲಿ ಉತ್ತಮ ಬದಲಾವಣೆ ತರುವುದು ಮತ್ತು ದೇಶಭಕ್ತಿ ಉದ್ದೀಪನಗೊಳಿಸುವ ಪಾತ್ರವನ್ನು ಆರ್‌ಎಸ್‌ಎಸ್ ನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು 'ತಪ್ಪು ನಿರ್ಣಯ' ಎಂದಿದ್ದರು. ಕಾಂಗ್ರೆಸ್ ಯಾವುದೇ ಹಂತದಲ್ಲಿ ದೇಶದ ಸಾಂವಿಧಾನಿಕ ಚೌಕಟ್ಟನ್ನು ವಶಪಡಿಸಲು ಪ್ರಯತ್ನಿಸಲಿಲ್ಲ. ಅಂದಿನ ತುರ್ತು ಪರಿಸ್ಥಿತಿ ಹಾಗೂ ಈಗ ದೇಶದಲ್ಲಿ ನಡೆಯುತ್ತಿರುವ ಸನ್ನಿವೇಶಗಳು ಮೂಲಭೂತವಾಗಿ ವಿಭಿನ್ನವಾಗಿವೆ ಎಂದಿದ್ದರು. ಜತೆಗೆ, ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.