ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರದ ಮತದಾರ ಪಟ್ಟಿ ಕುರಿತ ದತ್ತಾಂಶವನ್ನು ಹಂಚಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂಬ ವರದಿಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶ್ಲಾಘಿಸಿದ್ದಾರೆ.
ದತ್ತಾಂಶವನ್ನು ಹಂಚಿಕೊಳ್ಳುವ ನಿರ್ದಿಷ್ಟ ದಿನಾಂಕವನ್ನು ತಿಳಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದಾರೆ ಮತ್ತು ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಮತ್ತು ಮಷಿನ್ ಓದಬಲ್ಲ ಸ್ವರೂಪದಲ್ಲಿ ನೀಡುವಂತೆ ಕೋರಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರದ 2009–2024ರ ವರೆಗಿನ ಮತದಾರರ ಪಟ್ಟಿ ಕುರಿತ ದತ್ತಾಂಶವನ್ನು ಹಂಚಿಕೊಳ್ಳಲು ಚುನಾವಣಾ ಆಯೋಗವು ನಿರ್ಧರಿಸಿದೆ ಎನ್ನಲಾದ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ‘ಇದೊಂದು ಉತ್ತಮ ನಡೆ’ ಎಂದು ಅವರು ಶ್ಲಾಘಿಸಿದ್ದಾರೆ. ಆದರೆ, ಆಯೋಗವು ಈವರೆಗೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಅವರು ಪತ್ರಿಕೆಗಳಿಗೆ ಸುದೀರ್ಘ ಲೇಖನ ಬರೆದಿದ್ದರು. ತನಗೆ ನೇರವಾಗಿ ಪತ್ರ ಬರೆದರೆ ಮಾತ್ರ ಪ್ರತಿಕ್ರಿಯೆ ನೀಡಲಾಗುವುದು ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿತ್ತು.
ಆಯೋಗವು ಬಿಜೆಪಿಗೆ ಗುತ್ತಿಗೆ ನೀಡಿದೆಯೇ: ರಾವುತ್
ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಬಿಜೆಪಿಗೆ ಗುತ್ತಿಗೆ ನೀಡಲಾಗಿದೆಯೇ ಎಂದು ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ಅವರು ಸೋಮವಾರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಪತ್ರಿಕೆಯಲ್ಲಿ ಲೇಖನ ಬರೆದ ಬೆನ್ನಲ್ಲೇ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ‘ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದರೇ ಹೊರತು ಬಿಜೆಪಿಯನ್ನಲ್ಲ. ಹಾಗಿದ್ದಾಗ ಫಡಣವೀಸ್ ಅವರು ಏಕೆ ಪ್ರತಿಕ್ರಿಯೆ ನೀಡಬೇಕು? ಆಯೋಗದ ಮುಖದ ಮೇಲೆ ಬಿದ್ದ ಧೂಳನ್ನು ಒರೆಸುವ ಗುತ್ತಿಗೆಯನ್ನು ಬಿಜೆಪಿಗೆ ನೀಡಲಾಗಿದೆಯೇ’ ಎಂದು ಪ್ರಶ್ನಿಸಿದರು. ‘ಚುನಾವಣಾ ಆಯೋಗವು ಪಂಜರದೊಳಗಿನ ಗಿಳಿ. ಅದು ತನ್ನ ಆತ್ಮವನ್ನು ಮಾರಿಕೊಂಡಿದೆ ಮತ್ತು ಬಿಜೆಪಿಯ ಶಾಖೆಯಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.
ಆಯೋಗ ಸ್ಪಷ್ಟನೆ ನೀಡಲಿ: ಪ್ರಶಾಂತ್ ಕಿಶೋರ್
ಪಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಗ್ಗೆ ಎತ್ತಿರುವ ಸಂದೇಹಗಳನ್ನು ಚುನಾವಣಾ ಆಯೋಗ ಪರಿಹರಿಸಬೇಕು ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಒತ್ತಾಯಿಸಿದರು. ‘ಇಂಥ ವಿಷಯಗಳಲ್ಲಿ ನನ್ನನ್ನು ನಾನು ಪರಿಣತ ಎಂದು ಭಾವಿಸುವುದಿಲ್ಲ. ರಾಹುಲ್ ಗಾಂಧಿ ಅವರು ಲಿಖಿತವಾಗಿ ಮಾಡಿರುವ ಆರೋಪಗಳಿಗೆ ಆಯೋಗವು ಸ್ಪಷ್ಟನೆ ನೀಡಬೇಕು’ ಎಂದು ಕೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್ ದೇಶದ ಪ್ರಮುಖ ವಿರೋಧ ಪಕ್ಷ. ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ. ಇವರು ಎತ್ತುವ ಸಂದೇಹಗಳಿಗೆ ಆಯೋಗವು ಉತ್ತರ ನೀಡಬೇಕು. ಜನರ ಮನಸ್ಸಿನಲ್ಲಿ ಈ ಸಂದೇಹಗಳು ಉಳಿದುಕೊಂಡರೆ ಪ್ರಜಾಪ್ರಭುತ್ವಕ್ಕೆ ಅದು ಒಳಿತಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.