ADVERTISEMENT

ಸ್ಮೃತಿಗೆ ‘ರಾಹುಲ್‌ ಫೋಬಿಯಾ’: ಕಾಂಗ್ರೆಸ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 16:45 IST
Last Updated 9 ಆಗಸ್ಟ್ 2023, 16:45 IST
ಸ್ಮೃತಿ
ಸ್ಮೃತಿ   

ನವದೆಹಲಿ (ಪಿಟಿಐ): ಮಣಿಪುರ ಸಂಘರ್ಷದ ಬಗ್ಗೆ ದೇಶದ ಜನರನ್ನು ದಿಕ್ಕುತಪ್ಪಿಸಲು ಬಿಜೆಪಿಯು ‘ಫ್ಲೈಯಿಂಗ್‌ ಕಿಸ್‌’ ವಿವಾದ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಕಣಿವೆ ರಾಜ್ಯದ ಹಿಂಸಾಚಾರ ಕುರಿತು ಉಭಯ ಸದನಗಳಲ್ಲಿ ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ಇಷ್ಟವಿಲ್ಲ. ಹಾಗಾಗಿ, ರಾಹುಲ್‌ ವಿರುದ್ಧ ಅನಗತ್ಯವಾಗಿ ಈ ಆರೋಪ ಮಾಡುತ್ತಿದೆ. ಮಹಿಳೆಯರಿಗೆ ಎಂದಿಗೂ ಅವರು ಅಗೌರವ ತೋರಿಲ್ಲ’ ಎಂದು ಹೇಳಿದೆ. 

ಸಚಿವೆ ಸ್ಮೃತಿ ಇರಾನಿ ಅವರು ‘ರಾಹುಲ್‌ ಫೋಬಿಯಾ’ದಿಂದ ಬಳಲುತ್ತಿದ್ದಾರೆ. ಅದರಿಂದ ಅವರು ಹೊರಬರಬೇಕಿದೆ ಎಂದು ಲೋಕಸಭೆಯ ಕಾಂಗ್ರೆಸ್‌ ಸಚೇತಕ ಮಾಣಿಕಂ ಟ್ಯಾಗೋರ್ ವ್ಯಂಗ್ಯವಾಡಿದ್ದಾರೆ.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಭಾರತ್‌ ಜೋಡೊ ಯಾತ್ರೆಗೆ ಕೈಜೋಡಿಸಿ ಪಾಲ್ಗೊಂಡ ಎಲ್ಲರಿಗೂ ರಾಹುಲ್‌ ಅವರಲ್ಲಿರುವ ಪ್ರೀತಿ ಹಾಗೂ ಮಾನವೀಯ ಗುಣಗಳು ಅರ್ಥವಾಗಿವೆ. ಅವರ ಬಗ್ಗೆ ತಪ್ಪು ತಿಳಿವಳಿಕೆ ಹೊಂದುವುದು ಸ್ಮೃತಿ ಅವರಲ್ಲಿರುವ ದೋಷ. ಅದು ರಾಹುಲ್‌ ತಪ್ಪಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ‘ನಾನು ಆ ವೇಳೆ ವೀಕ್ಷಕರ ಗ್ಯಾಲರಿಯಲ್ಲಿದ್ದೆ. ರಾಹುಲ್‌ ಅವರು ಸಂಸದೆಯರಿಗೆ ಅಗೌರವ ತೋರುವಂತೆ ಸನ್ನೆ ಮಾಡಲಿಲ್ಲ. ಅದರ ಬಗ್ಗೆ ಅವರು (ಬಿಜೆಪಿ) ಕೆಟ್ಟ ಭಾವನೆ ಏಕೆ ತಳೆದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ. 

ಗಾಯಾಳಿಗೆ ನೆರವು: ಜನಪಥ್‌ ರಸ್ತೆಯಲ್ಲಿ ತಮ್ಮ ಬೆಂಗಾವಲು ಪಡೆಯೊಂದಿಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡ ಸವಾರರೊಬ್ಬರಿಗೆ ರಾಹುಲ್‌ ಗಾಂಧಿ ನೆರವಾದರು.

ಕಾರೊಂದು ಹಿಂಬದಿಯಿಂದ ಗುದ್ದಿದ್ದರಿಂದ ಸವಾರ ಕೆಳಗೆ ಬಿದ್ದರು. ಆಗ ರಾಹುಲ್‌ ಆತನಲ್ಲಿಗೆ ತೆರಳಿ ಸಂತೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.