ADVERTISEMENT

ಹತ್ರಾಸ್‌ ಸಂತ್ರಸ್ತೆಯ ಬಲವಂತದ ಅಂತ್ಯಸಂಸ್ಕಾರ; ರಾಹುಲ್, ಪ್ರಿಯಾಂಕ ವಾಗ್ದಾಳಿ

ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯ, ದೆಹಲಿಯಲ್ಲಿ ಕ್ಯಾಂಡಲ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 6:11 IST
Last Updated 30 ಸೆಪ್ಟೆಂಬರ್ 2020, 6:11 IST
ಪ್ರಿಯಾಂಕಾ ವಾದ್ರಾ
ಪ್ರಿಯಾಂಕಾ ವಾದ್ರಾ   

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಸಂತ್ರಸ್ತೆಯ ಶವವನ್ನು ಬುಧವಾರ ಮುಂಜಾನೆ ಅವರ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ದಹನ ಮಾಡಿದ ಉತ್ತರ ಪ್ರದೇಶ ಸರ್ಕಾರವನ್ನು ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಭಾರತದ ಪುತ್ರಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಪ್ರಕರಣದ ಹಿಂದಿನ ಸತ್ಯಗಳನ್ನು ಮರೆಮಾಚಲಾಗುತ್ತಿದೆ. ಆ ಸಂತ್ರಸ್ತೆ ಮಗಳ ಅಂತ್ಯಸಂಸ್ಕಾರ ಮಾಡುವ ಹಕ್ಕನ್ನೂ ಅವರ ಕುಟುಂಬದಿಂದ ಕಿತ್ತುಕೊಳ್ಳಲಾಗಿದೆ. ಇದು ಅವಮಾನಕರ ಮತ್ತು ಅನ್ಯಾಯ‘ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ ಉತ್ತರ ಪ್ರದೇಶ ಪೊಲೀಸರು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಆಕೆಯ ಮೃತದೇಹವನ್ನು ಬಲವಂತವಾಗಿ ತೆಗೆದುಕೊಂಡು ಬಂದು ಬುಧವಾರ ಮುಂಜಾನೆ 2.30 ಕ್ಕೆ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಸಂತ್ರಸ್ಥೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ADVERTISEMENT

ಈ ಘಟನೆಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ‘ಸಂತ್ರಸ್ತೆಯ ಶವಸಂಸ್ಕಾರ ವಿಚಾರದಲ್ಲಿ ಅವರ ಕುಟುಂಬಸ್ಥರೊಂದಿಗೆ ಅಮಾನೀಯವಾಗಿ ನಡೆದುಕೊಂಡಿರುವ ಉತ್ತರ ಪ್ರದೇಶ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು‘ ಎಂದು ಒತ್ತಾಯಿಸಿದ್ದಾರೆ.

‘ಸಂತ್ರಸ್ತೆಯ ಕುಟುಂಬದ ಪ್ರತಿಭಟನೆಯ ನಡುವೆಯೂ ಉತ್ತರ ಪ್ರದೇಶ ಸರ್ಕಾರ ಮುಂಜಾನೆ 2.30ಕ್ಕೆ ಬಲವಂತವಾಗಿ ಸಂತ್ರಸ್ತೆಯ ಮೃತದೇಹದ ಅಂತ್ಯಕ್ರಿಯೆ ನಡೆಸಿದೆ. ಜೀವಂತವಾಗಿದ್ದಾಗ ಆಕೆಯನ್ನು ಸರ್ಕಾರ ರಕ್ಷಿಸಲಿಲ್ಲ. ಆಕೆಯ ಮೇಲೆ ಹಲ್ಲೆ ನಡೆದಾಗ ಅವಳಿಗೆ ಸಕಾಲಿಕ ಚಿಕಿತ್ಸೆ ನೀಡಲಿಲ್ಲ. ಆಕೆ ಸಾವನ್ನಪ್ಪಿದ ನಂತರ ಅಂತಿಮ ವಿಧಿಗಳನ್ನು ನಿರ್ವಹಿಸುವ ಕುಟುಂಬದವರ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡಿದೆ. ಸತ್ತವರಿಗೆ ತೋರಬೇಕಾದ ಗೌರವವನ್ನು ನೀಡಲಿಲ್ಲ‘ ಎಂದು ಪ್ರಿಯಾಂಕಾ ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ಆಡಳಿತದಲ್ಲಿ ಯಾವುದೇ ನ್ಯಾಯವಿಲ್ಲ. ಎಲ್ಲ ಕಡೆ ಅನ್ಯಾಯ ಮೇಲುಗೈ ಸಾದಿಸುತ್ತಿದೆ. ಮೊದಲು ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ರಾತ್ರಿ ರಾಜಧಾನಿ ದೆಹಲಿಯಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕ್ಯಾಂಡಲ್ ಹಿಡಿದು‌ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.