ಮೋಹನ್ ಯಾದವ್
(ಪಿಟಿಐ ಚಿತ್ರ)
ಭೋಪಾಲ್: ಅಯೋಧ್ಯೆಯ ರಾಮಮಂದಿರದಲ್ಲಿ ವರ್ಷಾರಂಭದಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್ ಸ್ವೀಕರಿಸದ್ದಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮಂಗಳವಾರ ಹೇಳಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯ ಭಾಗವಾಗಿ ಸಿಎಂ ತವರು ಕ್ಷೇತ್ರವಾದ ಉಜ್ಜಯಿನಿ ನಗರದ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ, ಪ್ರಾರ್ಥನೆ ಸಲ್ಲಿಸಲಿದ್ದಾರೆ.
'ರಾಹುಲ್ ಅವರು ದೇವರ ದರ್ಶನ ಪಡೆಯಲಿ ಎಂದು ನಾನು ಹಾರೈಸುತ್ತೇನೆ. ಮಧ್ಯಪ್ರದೇಶದ ನಾಡಿನಲ್ಲಿ ದೇವರು ಅವರಿಗೆ ಬುದ್ದಿ ಕರುಣಿಸಲಿ. ಶ್ರೀರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ಅವರ ಪಕ್ಷ ತಿರಸ್ಕರಿಸಿರುವುದಕ್ಕೆ ಪಶ್ಚಾತ್ತಾಪಪಡಬೇಕು. ಅದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು' ಎಂದು ಮೋಹನ್ ಯಾದವ್ ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಅಧಿಕಾರದ ಅವಧಿಯಲ್ಲಿ ಅನ್ಯಾಯ ಎಸಗಿದ ಪಕ್ಷವೇ ಈಗ ನ್ಯಾಯಕ್ಕಾಗಿ ಯಾತ್ರೆ ನಡೆಸುತ್ತಿದೆ. ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಯು ಯಶಸ್ಸು ಕಾಣುವುದಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.