ADVERTISEMENT

‘ಅಡ್ವಾಣಿಯನ್ನು ಒದ್ದು ಕೆಳಗಿಳಿಸಿದ ಮೋದಿ’

ಅಡ್ವಾಣಿ ಬ್ಲಾಗ್‌ ಬರಹಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ l ಮೋದಿ ಮತ್ತು ಶಾ ಮೇಲೆ ಮುಗಿಬಿದ್ದ ವಿಪಕ್ಷಗಳು

​ಪ್ರಜಾವಾಣಿ ವಾರ್ತೆ
Published 11 ಮೇ 2019, 10:44 IST
Last Updated 11 ಮೇ 2019, 10:44 IST
ಚಂದ್ರಾಪುರದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಾಹುಲ್ ಗಾಂಧಿ –ಪಿಟಿಐ ಚಿತ್ರ
ಚಂದ್ರಾಪುರದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಾಹುಲ್ ಗಾಂಧಿ –ಪಿಟಿಐ ಚಿತ್ರ   

ಚಂದ್ರಾಪುರ (ಮಹಾರಾಷ್ಟ್ರ) (ಪಿಟಿಐ):ಪ್ರಧಾನಿ ಮೋದಿ ಅವರು ಎಲ್‌.ಕೆ.ಅಡ್ವಾಣಿ ಅವರನ್ನು ಒದ್ದುವೇದಿಕೆಯಿಂದ ಕೆಳಗೆ ಇಳಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಬಿಜೆಪಿಯಲ್ಲಿ ಮೋದಿ ಮತ್ತು ಶಾ ಕಾರ್ಯವೈಖರಿಯ ಬಗ್ಗೆ ಅಡ್ವಾಣಿ ಅವರು ತಮ್ಮ ಬ್ಲಾಗ್ ಬರಹದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಮರುದಿನವೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

‘ಬಿಜೆಪಿಯವರು ಸದಾ ಹಿಂದುತ್ವದ ಬಗ್ಗೆ ಮಾತನಾಡುತ್ತಿರುತ್ತಾರೆ. ಹಿಂದುತ್ವದಲ್ಲಿ ಗುರುವೇ ಸರ್ವೋತ್ತಮ. ಹಿಂದುತ್ವವು ಗುರು–ಶಿಷ್ಯ ಪರಂಪರೆಯ ಬಗ್ಗೆ ಮಾತನಾಡುತ್ತದೆ. ಮೋದಿ ಅವರ ಗುರು ಯಾರು? ಅಡ್ವಾಣಿ ಅಲ್ಲವೇ. ಮೋದಿ ಅವರು ಅಡ್ವಾಣಿ ಅವರನ್ನು ಒದ್ದು, ವೇದಿಕೆಯಿಂದ ಕೆಳಕ್ಕೆ ದೂಡಿದ್ದಾರೆ. ಹಿಂದುತ್ವದಲ್ಲಿ ಗುರುವಿಗೆ ಅಪಾರ ಗೌರವ ನೀಡಲಾಗುತ್ತದೆ. ಆದರೆ ಅಡ್ವಾಣಿ ಅವರಿಗೆ ಗೌರವವೇ ಸಿಗುತ್ತಿಲ್ಲ. ಇದು ಹಿಂದುತ್ವವೇ’ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ADVERTISEMENT

ಅಡ್ವಾಣಿ ಹೇಳಿಕೆಗೆ ಸ್ವಾಗತ:ರಾಜಕೀಯ ವಿರೋಧಿಗಳು ದೇಶದ್ರೋಹಿಗಳಲ್ಲ ಎಂದಿರುವ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರ ಹೇಳಿಕೆಯನ್ನು ವಿರೋಧ ಪಕ್ಷಗಳು ಸ್ವಾಗತಿಸಿವೆ. ಅಡ್ವಾಣಿ ಅವರ ಹೇಳಿಕೆಯು ಮೋದಿ ಮತ್ತು ಶಾ ಅವರ ರಾಜಕೀಯ ದಿವಾಳಿತನವನ್ನು ಬಯಲು ಮಾಡಿದೆ ಎಂದು ವಿಪಕ್ಷಗಳು ಹರಿಹಾಯ್ದಿವೆ.

2014ರ ಚುನಾವಣೆಯ ನಂತರ ಇದೇ ಮೊದಲ ಬಾರಿ ಅಡ್ವಾಣಿ ಅವರು ತಮ್ಮ ಬ್ಲಾಗ್‌ನಲ್ಲಿ ಗುರುವಾರ ಬರಹವೊಂದನ್ನು ಪ್ರಕಟಿಸಿದ್ದರು. ಅದರಲ್ಲಿ ‘ರಾಜಕೀಯ ಭಿನ್ನಾಭಿಪ್ರಾಯ ಇರುವವರನ್ನು ದೇಶದ್ರೋಹಿಗಳು ಎಂದು ಹೇಳುವ ಪರಿಪಾಟ ನಮ್ಮ ಭಾರತ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಎಂದೂ ಇರಲಿಲ್ಲ’ ಎಂದು ಅಡ್ವಾಣಿ ಬರೆದಿದ್ದರು.

‘ರಾಜಕೀಯ ವಿರೋಧಿಗಳಿಗೆ ದೇಶದ್ರೋಹಿ ಮತ್ತು ಪಾಕ್‌ ಏಜೆಂಟ್‌ ಎಂಬ ಹಣೆಪಟ್ಟಿ ಹಚ್ಚುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಅಭ್ಯಾಸವಾಗಿಹೋಗಿದೆ. ಮೋದಿ ಮತ್ತು ಶಾ ಇಬ್ಬರೂ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ನಿಜವಾದ ದೇಶದ್ರೋಹಿಗಳು ಯಾರು ಎಂದು ಅವರು ಹೇಳಬೇಕು’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಈ ಬರಹಕ್ಕೆ ಪ್ರತಿಕ್ರಿಯೆ ನೀಡಲು ಸಚಿವ ನಿತಿನ್ ಗಡ್ಕರಿ ನಿರಾಕರಿಸಿದ್ದಾರೆ.

‘ಅಡ್ವಾಣಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಬ್ಲಾಗ್ ಬರಹದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಗಡ್ಕರಿ ಹೇಳಿದ್ದಾರೆ.

***

ಬಿಜೆಪಿ ನೀತಿಗಳು ಮೋದಿ ಮತ್ತು ಶಾ ಅಡಿ ಸಂಪೂರ್ಣ ಬದಲಾಗಿವೆ. ಮೋದಿಯವರೇ, ನೀವು ದೆಹಲಿ ಗದ್ದುಗೆ ಏರಲು ನೆರವಾದ ಅಡ್ವಾಣಿ ಮಾತನ್ನು ಈಗಲಾದರೂ ಪಾಲಿಸಿ.
ಕಪಿಲ್‌ ಸಿಬಲ್, ಕಾಂಗ್ರೆಸ್‌ ನಾಯಕ.

***

ಅಡ್ವಾಣಿ ಅವರಿಗೆ ದೇಶ ಮೊದಲು, ಪಕ್ಷ ನಂತರ ಮತ್ತು ವ್ಯಕ್ತಿ ಕೊನೆಯವನಾಗಿದ್ದ. ಆದರೆ ಮೋದಿ ಮತ್ತು ಶಾಗೆ ಸ್ವಹಿತಾಸಕ್ತಿಯೇ ಮೊದಲು, ದೇಶ ಕಡೆಯದ್ದು.

ಚಂದ್ರಬಾಬು ನಾಯ್ಡು, ಟಿಡಿಪಿ ಅಧ್ಯಕ್ಷ, ಆಂಧ್ರಪ್ರದೇಶ ಮುಖ್ಯಮಂತ್ರಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.