ADVERTISEMENT

ಪೂಂಚ್‌, ಇತರೆ ಪ್ರದೇಶಕ್ಕೆ ಪರಿಹಾರ ಪ್ಯಾಕೇಜ್‌ ನೀಡಿ: ಪ್ರಧಾನಿಗೆ ರಾಹುಲ್‌ ಪತ್ರ

ಪಾಕಿಸ್ತಾನದಿಂದ ಶೆಲ್‌ ದಾಳಿ–

ಪಿಟಿಐ
Published 29 ಮೇ 2025, 14:35 IST
Last Updated 29 ಮೇ 2025, 14:35 IST
ರಾಹುಲ್ ಗಾಂಧಿ–ಪಿಟಿಐ ಚಿತ್ರ
ರಾಹುಲ್ ಗಾಂಧಿ–ಪಿಟಿಐ ಚಿತ್ರ   

ನವದೆಹಲಿ: ‘ಮೇ 7ರಿಂದ 9ರವರೆಗೆ ಪಾಕಿಸ್ತಾನದಿಂದ ಶೆಲ್‌ ದಾಳಿಗೊಳಗಾದ ಪೂಂಛ್ ಸೇರಿದಂತೆ ಇತರೆ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉದಾರ ಹಾಗೂ ತಕ್ಷಣದ ಪುನರ್ವಸತಿ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕಳೆದ ಶನಿವಾರ ರಾಹುಲ್‌ ಗಾಂಧಿ ಅವರು ಪೂಂಛ್‌ಗೆ ತೆರಳಿ, ಸಂತ್ರಸ್ತರ ಕುಟುಂಬದವರನ್ನು ಭೇಟಿಯಾಗಿ ಧೈರ್ಯ ತುಂಬಿ, ಸಾಂತ್ವನ ಹೇಳಿದ್ದರು. 

ಈ ವೇಳೆ ಗುರುದ್ವಾರ ಸಿಂಗ್‌ ಸಭಾ, ಗೀತಾ ಭವನ್‌ ದೇವಾಲಯ ಹಾಗೂ ಜಿಯಾ–ಉಲ್‌–ಉಲುಮ್‌ ಮದರಸಾಕ್ಕೆ ಭೇಟಿ ನೀಡಿದ್ದರು. ನಂತರ ಕ್ರೈಸ್ಟ್‌ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ್ದರು. 

ADVERTISEMENT

‘ಪಾಕಿಸ್ತಾನದ ಶೆಲ್‌ ದಾಳಿಯಿಂದ ಪೂಂಛ್ ಹಾಗೂ ಸುತ್ತಲಿನ ಪ್ರದೇಶದಲ್ಲಿ 4 ಮಕ್ಕಳು ಸೇರಿದಂತೆ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಏಕಾಏಕಿ ಹಾಗೂ ಅನಿಯಂತ್ರಿತ ದಾಳಿಯಿಂದ ನೂರಾರು ಮನೆ, ಅಂಗಡಿ, ಶಾಲೆ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಹಾನಿಯಾಗಿದೆ. ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಸಂಪಾದಿಸಿದ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಕಷ್ಟದ ಸ್ಥಿತಿಯಲ್ಲಿ ನೋವು ಅರ್ಥ ಮಾಡಿಕೊಂಡು, ಅವರ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಎಲ್ಲ ರೀತಿಯ ನೆರವು ನೀಡಬೇಕು. ಕೇಂದ್ರ ಸರ್ಕಾರವು ಕೂಡಲೇ ಉದಾರ ಪರಿಹಾರ ಹಾಗೂ ಪುನರ್ವಸತಿ ಪ್ಯಾಕೇಜ್‌ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಾನು ಕೇವಲ ಮನವಿ ಮಾಡುತ್ತಿಲ್ಲ. ಸರ್ಕಾರದ ಜವಾಬ್ದಾರಿಯನ್ನು ನೆನಪಿಸುತ್ತಿದ್ದೇನೆ. ಇದು ನೆರವಲ್ಲ, ಬದಲಾಗಿ ಸರ್ಕಾರದ ಕರ್ತವ್ಯ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.