ರಾಜನಾಥ್ ಸಿಂಗ್
ನವದೆಹಲಿ:ಭಾರತ ಮತ್ತು ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿ ಸೇನಾ ಮುಖ್ಯಸ್ಥರನ್ನು ಉಲ್ಲೇಖಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
‘ಸೇನಾ ಮುಖ್ಯಸ್ಥರು ಹೇಳಿದ್ದಾರೆಂದು ರಾಹುಲ್ ಉಲ್ಲೇಖಿಸಿರುವ ಪದಗಳನ್ನು ಸೇನಾ ಮುಖ್ಯಸ್ಥರು ಎಂದೂ ಹೇಳಿಲ್ಲ. ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಹುಲ್ ಗಾಂಧಿ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿರುವುದು ವಿಷಾದನೀಯ’ಎಂದು ಅವರು ಹೇಳಿದ್ದಾರೆ.
ಸೋಮವಾರ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿದೆ. ಆದರೆ, ಮೋದಿ ಇದನ್ನು ನಿರಾಕರಿಸಿದ್ದಾರೆ ಎಂದಿದ್ದರು. ಪ್ರಧಾನಿ ಹೇಳಿಕೆಯನ್ನು ಸೇನೆ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು.
ಭಾರತ ಮತ್ತು ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿ ಸೋಮವಾರ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಸುಳ್ಳು. ಗಡಿ ಉದ್ನಿಗ್ನತೆ ಶಮನವಾಗಿ ಉಭಯ ದೇಶಗಳ ಸೇನೆ ಜಮಾವಣೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಸರ್ಕಾರ ಸಂಸತ್ತಿನಲ್ಲಿ ಹಂಚಿಕೊಂಡಿದೆ ಎಂದು ಎಂದು ರಾಜನಾಥ್ ಸ್ಪಷ್ಟಪಡಿಸಿದ್ದಾರೆ.
‘1962ರ ಸಂಘರ್ಷದ ಬಳಿಕ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾವು ಭಾರತದ 38 ಸಾವಿರ ಚದರ ಕಿ.ಮೀ. ಪ್ರದೇಶವನ್ನು ವಶಪಡಿಸಿಕೊಂಡಿದೆ. 1963ರಲ್ಲಿ ಪಾಕಿಸ್ತಾನವು 5,180 ಚದರ ಕಿ.ಮೀ. ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಅದನ್ನು ಹೊರತುಪಡಿಸಿದರೆ, ಭಾರತದ ಯಾವುದೇ ಭೂಪ್ರದೇಶ ಚೀನಾದ ವಶದಲ್ಲಿಲ್ಲ. 1962 ಮತ್ತು 1963ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ರಾಹುಲ್ ಅವರಿಗೆ ಆ ಬಗ್ಗೆ ಆತ್ಮಾವಲೋಕನ ಮಾಡಬಹುದಿತ್ತು’ ಎಂದಿದ್ದಾರೆ.
ಇತಿಹಾಸದ ಈ ಅಂಶಗಳ ಬಗ್ಗೆ ರಾಹುಲ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.
‘ಉದ್ದೇಶಪೂರ್ವಕ ಸುಳ್ಳು’
‘2024ರ ಡಿಸೆಂಬರ್‌ನಲ್ಲಿ ನಾನು ಅಮೆರಿಕಕ್ಕೆ ಭೇಟಿ ನೀಡಿದ್ದರ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಟೀಕಿಸಿದ್ದಾರೆ. ‘ಅಮೆರಿಕದ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮ ಪ್ರಧಾನಿಗೆ ಆಹ್ವಾನ ಸಿಗಲಿ ಎಂಬ ಉದ್ದೇಶದಿಂದ ವಿದೇಶಾಂಗ ಸಚಿವರನ್ನು ಅಮೆರಿಕಕ್ಕೆ ಕಳುಹಿಸಬೇಕಾಗಿರಲಿಲ್ಲ’ ಎಂದು ರಾಹುಲ್ ಹೇಳಿದ್ದರು. ‘ಈ ಹಿಂದೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಆ್ಯಂಟನಿ ಬ್ಲಿಂಕನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಜೇಕ್ ಸುಲಿವನ್ ಅವರ ಜತೆಗಿನ ಮಾತುಕತೆಗಾಗಿ ಅಮೆರಿಕಕ್ಕೆ ಭೇಟಿ ನೀಡಿದ್ದೆ’ ಎಂದು ಜೈಶಂಕರ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ‘ಪ್ರಧಾನ ಮಂತ್ರಿ ಅವರನ್ನು ಆಹ್ವಾನಿಸುವ ವಿಷಯದ ಬಗ್ಗೆ ಯಾವ ಹಂತದಲ್ಲೂ ಚರ್ಚಿಸಲಾಗಿಲ್ಲ. ನಮ್ಮ ಪ್ರಧಾನಿ ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ವಾಸ್ತವವಾಗಿ ಅಂತಹ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಪ್ರಧಾನಿ ಅವರ ವಿಶೇಷ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.