ADVERTISEMENT

ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ: ಕಾಶ್ಮೀರ ಕಣಿವೆಯಾದ್ಯಂತ ತೀವ್ರ ಶೋಧ

ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ 

ಪಿಟಿಐ
Published 27 ನವೆಂಬರ್ 2025, 14:40 IST
Last Updated 27 ನವೆಂಬರ್ 2025, 14:40 IST
ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಪುಲ್ವಾಮಾದಲ್ಲಿ ಜೆಇಐ ಸದಸ್ಯನ ಮನೆಯಲ್ಲಿ ಶೋಧ ನಡೆಸಿದರು –ಪಿಟಿಐ ಚಿತ್ರ
ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಪುಲ್ವಾಮಾದಲ್ಲಿ ಜೆಇಐ ಸದಸ್ಯನ ಮನೆಯಲ್ಲಿ ಶೋಧ ನಡೆಸಿದರು –ಪಿಟಿಐ ಚಿತ್ರ   

ಶ್ರೀನಗರ: ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಇಐ) ಸಂಘಟನೆಯ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಗುರುವಾರ ಕಾಶ್ಮೀರ ಕಣಿವೆಯಾದ್ಯಂತ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತನಾಗ್, ಪುಲ್ವಾಮಾ, ಬಡ್ಗಾಮ್, ಕುಲ್ಗಾಮ್ ಮತ್ತು ಕುಪ್ವಾಡ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆದಿದೆ. ಭಯೋತ್ಪಾದಕ ಜಾಲ ಮತ್ತು ಅದಕ್ಕೆ ಬೆಂಬಲ ನೀಡುವ ವ್ಯವಸ್ಥೆಗಳನ್ನು ಭೇದಿಸುವ ಪ್ರಯತ್ನಗಳ ಭಾಗವಾಗಿ ಜೆಇಐ ಸದಸ್ಯರು ಹಾಗೂ ಅವರ ಸಹಚರರಿಗೆ ಸೇರಿದ ಮನೆಗಳು, ಇತರ ತಾಣಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದಿದ್ದಾರೆ. 

ಜೆಇಐನ ಕೆಲವು ಸದಸ್ಯರು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ADVERTISEMENT

ಕೆಲವು ಸದಸ್ಯರ ಮನೆಗಳಿಂದ ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳು ಮತ್ತು ಪುಸ್ತಕಗಳು ಸಿಕ್ಕಿವೆ. ವಿವರವಾದ ಪರಿಶೀಲನೆಗಾಗಿ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. 

ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಶಂಕೆಯ ಮೇರೆಗೆ ಹಂದ್ವಾಢದ ವಾರಿಪೋರಾದಲ್ಲಿರುವ ಜಾಮಿಯಾ ಇಸ್ಲಾಮಿಯಾ ಸಂಸ್ಥೆಯ ಮೇಲೂ ದಾಳಿ ನಡೆಸಲಾಗಿದೆ.

ದೆಹಲಿ ಸ್ಫೋಟ: ಎನ್‌ಐಎ ಕಸ್ಟಡಿಗೆ ಆರೋಪಿ

ನವದೆಹಲಿ: ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಆತ್ಮಾಹುತಿ ಬಾಂಬರ್‌ ಡಾ.ಉಮರ್‌ ನಬಿಗೆ ಆಶ್ರಯ ನೀಡಿದ ಆರೋಪದ ಮೇಲೆ ಫರೀದಾಬಾದ್‌ನ ನಿವಾಸಿ ಶೋಯಬ್‌ ಎಂಬಾತನನ್ನು ದೆಹಲಿಯ ನ್ಯಾಯಾಲಯ ಹತ್ತು ದಿನಗಳವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ. ಹರಿಯಾಣದ ಫರೀದಾಬಾದ್‌ನ ಧೌಜ್‌ನಲ್ಲಿ ಬಂಧಿಸಿದ ಶೋಯಬ್‌ನನ್ನು ಅಧಿಕಾರಿಗಳು ಬಿಗಿ ಭದ್ರತೆಯ ನಡುವೆ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಬಾಂಬ್‌ ಸ್ಫೋಟ ಘಟನೆಗೂ ಮುನ್ನ ಉಮರ್‌ ನಬಿಗೆ ಆಶ್ರಯ ನೀಡಿದ ಆರೋಪದಲ್ಲಿ ಶೋಯಬ್‌ನನ್ನು ಧೌಜ್‌ನಲ್ಲಿರುವ ನಿವಾಸದಲ್ಲಿ ಬಂಧಿಸಲಾಯಿತು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೊಬ್ಬ ಆರೋಪಿ ಅಮೀರ್‌ ರಶೀದ್‌ ಅಲಿಯ 10 ದಿನಗಳ ಕಸ್ಟಡಿ ನ.27ಕ್ಕೆ ಕೊನೆಗೊಂಡ ಕಾರಣ ಆತನನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅಂಜು ಬಜಾಜ್‌ ಚಾಂದನಾ ಅವರು ರಶೀದ್‌ನನ್ನು ಇನ್ನೂ ಏಳು ದಿನ ವಿಚಾರಣೆ ನಡೆಸಲು ತನಿಖಾ ಸಂಸ್ಥೆಗೆ ಅನುಮತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.