ಅಮಾನತು
ನವದೆಹಲಿ: ಕಾಶ್ಮೀರದ ಅಮರನಾಥ ಯಾತ್ರೆ ಭದ್ರತೆಗಾಗಿ ತ್ರಿಪುರಾದಿಂದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯನ್ನು ಕರೆದೊಯ್ಯಲು ಶಿಥಿಲಗೊಂಡ ಕೊಳಕು ಬೋಗಿಗಳನ್ನು ಹೊಂದಿರುವ ರೈಲನ್ನು ಒದಗಿಸಿದ ಸಂಬಂಧ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಬುಧವಾರ ಬಿಡುಗಡೆಯಾದ ರೈಲ್ವೆ ಸಚಿವಾಲಯದ ಹೇಳಿಕೆಯ ಪ್ರಕಾರ, ಭದ್ರತಾ ಪಡೆಗಳ ಘನತೆ ಅತ್ಯುನ್ನತವಾಗಿದೆ. ಅಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ..
ಶಿಥಿಲಗೊಂಡ ರೈಲಿನಲ್ಲಿ ಬಿಎಸ್‌ಎಫ್ ಯೋಧರು ಪ್ರಯಾಣಿಸುತ್ತಿರುವ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಈ ಆರೋಪಗಳನ್ನು ಈಶಾನ್ಯ ಗಡಿನಾಡು ರೈಲ್ವೆ ವಲಯವು ತಳ್ಳಿಹಾಕಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ತ್ರಿಪುರಾದ ಉದಯಪುರದಿಂದ ಜಮ್ಮು ತಾವಿಗೆ ವಿಶೇಷ ರೈಲು ಹತ್ತಲು ಬಿಎಸ್‌ಎಫ್‌ನ 13 ತುಕಡಿಗಳಿಂದ ಸುಮಾರು 1,200 ಬಿಎಸ್‌ಎಫ್ ಸೈನಿಕರು ಸಿದ್ಧರಾಗಿದ್ದರು. ರೈಲು ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ನಾಲ್ಕು ಸ್ಥಳಗಳಲ್ಲಿ ನಿಲ್ಲಿಸಿ ಸೈನಿಕರನ್ನು ಹತ್ತಿಸಿಕೊಳ್ಳಬೇಕಿತ್ತು. ಆದರೆ, ಜೂನ್ 9 ರಂದು ಬಿಎಸ್‌ಎಫ್‌ಗೆ ರೈಲು ಸಿಕ್ಕಿದೆ. ರೈಲಿನ ಅನೈರ್ಮಲ್ಯ ಮತ್ತು ಶಿಥಿಲ ಬೋಗಿಗಳನ್ನು ಕಂಡ ಯೋಧರು ವಿಡಿಯೊಗಳನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಗಿಗಳ ದುರವಸ್ಥೆ ಕಂಡು ಎಲ್ಲೆಡೆಯಿಂದ ಆಕ್ರೋಶ ಎದುರಾದ ಬಳಿಕ ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಅಲಿಪುರ್ದುವಾರ್ ರೈಲ್ವೆ ವಿಭಾಗದ ಮೂವರು ಹಿರಿಯ ಸೆಕ್ಷನ್ ಎಂಜಿನಿಯರ್‌ಗಳು ಮತ್ತು ಕೋಚ್ ಡಿಪೊ ಅಧಿಕಾರಿಯನ್ನು ರೈಲ್ವೆ ಸಚಿವರು ಅಮಾನತುಗೊಳಿಸಿದ್ದಾರೆ ಎಂದು ರೈಲ್ವೆ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಭದ್ರತಾ ಪಡೆಗಳ ಘನತೆ ಅತ್ಯಂತ ಮುಖ್ಯ ಮತ್ತು ಅಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ.
ಭದ್ರತಾ ಸಿಬ್ಬಂದಿಯ ಸುಗಮ ಮತ್ತು ಆರಾಮದಾಯಕ ಸಂಚಾರಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸರ್ಕಾರದ ಸಂಪೂರ್ಣ ಗಮನವು ಕೆಲವು ಆಕರ್ಷಕ ರೈಲುಗಳ ಕುರಿತಂತೆ ಪ್ರಚಾರ ತೆಗೆದುಕೊಳ್ಳುವುದರಲ್ಲೇ ಇದ್ದಾಗ ಜನಸಾಮಾನ್ಯರು ಪ್ರಾಣಿಗಳಂತೆ ಪ್ರಯಾಣಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಟೀಕಿಸಿದ್ದರು.
ಅಮರನಾಥ ಯಾತ್ರೆಗೆ ತೆರಳುವ ನಮ್ಮ ಬಿಎಸ್‌ಎಫ್ ಯೋಧರಿಗೆ ಕೊಳಕು, ಜಿರಳೆಗಳು ತುಂಬಿರುವ ಮತ್ತು ಮುರಿದ ಆಸನಗಳಿಂದ ತುಂಬಿದ ಕೊಳಕು ರೈಲನ್ನು ಒದಗಿಸಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಾಚಿಕೆಗೇಡು ಎಂದು ಕುಟುಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.