ADVERTISEMENT

ದೆಹಲಿ: ಕೋವಿಡ್‌ ಚಿಕಿತ್ಸೆಗಾಗಿ ರೈಲ್ವೆ ಇಲಾಖೆಯಿಂದ 800 ಹಾಸಿಗೆಗಳ ಸೌಲಭ್ಯ

ಪಿಟಿಐ
Published 18 ನವೆಂಬರ್ 2020, 15:26 IST
Last Updated 18 ನವೆಂಬರ್ 2020, 15:26 IST
ವೈರಸ್‌
ವೈರಸ್‌   

ನವದೆಹಲಿ: ಕೋವಿಡ್‌–19 ಚಿಕಿತ್ಸೆಗಾಗಿ ಇಲ್ಲಿನ ರೈಲು ಬೋಗಿಗಳಲ್ಲಿ 800 ಹಾಸಿಗೆಗಳ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಲಿದೆ ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ.

ಶಕುರ್‌ ಬಸ್ತಿ ರೈಲು ನಿಲ್ದಾಣಗಳಲ್ಲಿ ಪ್ರತ್ಯೇಕ ಬೋಗಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ. ಕೋವಿಡ್‌ ಕರ್ತವ್ಯಕ್ಕಾಗಿ ನಿಯೋಜಿಸಲಾದ 45 ವೈದ್ಯರು ಮತ್ತು ಅರೆಸೇನಾ ಪಡೆಯ 160 ಅರೆವೈದ್ಯಕೀಯ ಸಿಬ್ಬಂದಿ ದೆಹಲಿಗೆ ಈಗಾಗಲೇ ಬಂದಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಓ) ದೆಹಲಿ ವಿಮಾನ ನಿಲ್ದಾಣದ ಬಳಿಯಿರುವ ಕೋವಿಡ್‌ ಆಸ್ಪತ್ರೆಯಲ್ಲಿ 3–4 ದಿನಗಳೊಳಗೆ 35 ಬಿಐಬಿಎಪಿ ಹಾಸಿಗೆ ಮತ್ತು ಹೆಚ್ಚುವರಿಯಾಗಿ ತುರ್ತು ನಿಗಾ ಘಟಕಗಳ ಹಾಸಿಗೆಗಳನ್ನು ಮೀಸಲಿರಿಸಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್–19 ಪೀಡಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಈ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಉನ್ನತ ಮಟ್ಟದ ಸಭೆ ನಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ದೆಹಲಿಯಲ್ಲಿ ಅ.28ರಿಂದ ಪ್ರತಿನಿತ್ಯ 5000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ನ.11 ರಂದು ಮೊದಲ ಬಾರಿಗೆ 8,000 ಪ್ರಕರಣಗಳು ವರದಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.