ADVERTISEMENT

54 ಸಾವಿರಕ್ಕೂ ಹೆಚ್ಚು ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸಲಿದೆ ಭಾರತೀಯ ರೈಲ್ವೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 14:47 IST
Last Updated 12 ನವೆಂಬರ್ 2023, 14:47 IST
ಸಿ.ಸಿ.ಟಿ.ವಿ ಕ್ಯಾಮೆರಾ
ಸಿ.ಸಿ.ಟಿ.ವಿ ಕ್ಯಾಮೆರಾ   

ನವದೆಹಲಿ: ಪ್ರಯಾಣಿಕರ ಸುರಕ್ಷತೆಗಾಗಿ ಭಾರತೀಯ ರೈಲ್ವೆಯು 54 ಸಾವಿರಕ್ಕೂ ಹೆಚ್ಚು ಬೋಗಿಗಳಲ್ಲಿ ಮತ್ತು 5 ಸಾವಿರ ಎಲೆಕ್ಟ್ರಿಕ್ ಲೋಕೊಮೋಟಿವ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಿದೆ.

ರಾಜಧಾನಿ ಮತ್ತು ವಂದೇ ಭಾರತ್‌ ರೈಲುಗಳ ಬೋಗಿಗಳು ಸೇರಿದಂತೆ ಸದ್ಯ 7 ಸಾವಿರ ಬೋಗಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳು ಹಾಗೂ ಉಪನಗರ ರೈಲುಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

ಒಟ್ಟು 82 ಸಾವಿರ ಬೋಗಿಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದ್ದಾರೆ. 

ADVERTISEMENT

ಅಂದಾಜು ₹2,200 ಕೋಟಿ ವೆಚ್ಚದ ಈ ಯೋಜನೆಯನ್ನು ರೈಲ್ವೆ ಮಾಹಿತಿ ವ್ಯವಸ್ಥೆಯ ಕೇಂದ್ರವು (ಸಿಆರ್‌ಐಎಸ್‌) ಜಾರಿಗೊಳಿಸುತ್ತಿದೆ ಎಂದಿದ್ದಾರೆ.

ಹೆಚ್ಚುವರಿಯಾಗಿ 20 ಸಾವಿರ ಬೋಗಿಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವ ಯೋಜನೆಗೆ ಬಜೆಟ್‌ ಅನುಮೋದನೆ ಬಾಕಿ ಉಳಿದಿದೆ. ಮುಂದಿನ ವರ್ಷ ಫೆಬ್ರುವರಿಯಲ್ಲಿ ಈ ಕಾರ್ಯವು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವಿವರಿಸಿದ್ದಾರೆ. ಪ್ರತಿ ಬೋಗಿಯು ಎಂಟು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಹೊಂದಲಿದೆ ಎಂದಿದ್ದಾರೆ.

866 ರೈಲು ನಿಲ್ದಾಣಗಳಲ್ಲಿ ಸಿ.ಸಿ.ಟಿ.ವಿ. ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಈಚೆಗೆ ಹೇಳಿದ್ದರು.

ಮಹಿಳೆಯರು ಮತ್ತು ಮಕ್ಕಳು ಸುರಕ್ಷತೆಯ ದೃಷ್ಟಿಯಿಂದ ಬೋಗಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.