ನವದೆಹಲಿ: ರೈಲು ಸೇವೆಯ ದಕ್ಷತೆ ಹೆಚ್ಚಿಸುವ ಉದ್ದೇಶದಿಂದಕೋವಿಡ್–19 ಪಿಡುಗಿನ ಅವಧಿ ಬಳಿಕ ರೈಲುಗಳ ಅನಗತ್ಯವಾದ ನಿಲುಗಡೆಗಳಿಗೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದಕ್ಕಾಗಿ ‘ಜಿರೊ ಬೇಸ್‌ಡ್’(ಸಂಪೂರ್ಣವಾಗಿ ಹೊಸದಾದ) ವೇಳಾಪಟ್ಟಿಯನ್ನು ಸಿದ್ಧಪಡಿಸುವ ಹೊಣೆಯನ್ನು ರೈಲ್ವೆ ಇಲಾಖೆಮುಂಬೈನ ಐಐಟಿಗೆ ನೀಡಿದೆ. ಈ ಸಂಸ್ಥೆ ನೀಡಿರುವ ಪ್ರಸ್ತಾವನೆಯಂತೆ ಪ್ರಸ್ತುತ ರೈಲ್ವೆ ಜಾಲದಲ್ಲಿ ಇರುವ 5,500ರಿಂದ 6,000 ನಿಲುಗಡೆಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಹೊಸ ವೇಳಾಪಟ್ಟಿಯಿಂದಾಗಿ ಹಲವು ಮೈಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಸಂಖ್ಯೆ ಇಳಿಕೆಯಾಗಲಿದ್ದು, ರೈಲಿನ ವೇಗ ಹೆಚ್ಚಲಿದೆ. ಜೊತೆಗೆ 50ಕ್ಕಿಂತ ಕಡಿಮೆ ಪ್ರಯಾಣಿಕರು ಒಂದು ನಿಲ್ದಾಣದಲ್ಲಿ ಇಳಿಯುತ್ತಿದ್ದರೆ ಅಥವಾ ಹತ್ತುತ್ತಿದ್ದರೆ, ನಷ್ಟ ಕಡಿಮೆ ಮಾಡುವ ಉದ್ದೇಶದಿಂದ ಇಂಥ ನಿಲುಗಡೆಯನ್ನೂ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
‘ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಈ ವ್ಯವಸ್ಥೆ ಜಾರಿಯಲ್ಲಿ ವಿಳಂಬವಾಗಿದೆ. ಆದರೆ ಈ ಹೊಸ ವ್ಯವಸ್ಥೆಯ ಅನುಷ್ಠಾನ ಖಂಡಿತವಾಗಿಯೂ ಆಗಲಿದೆ’ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ತಿಳಿಸಿದರು.
‘ನಿಲ್ದಾಣವೊಂದರಲ್ಲಿ ರೈಲೊಂದರ ನಿಲುಗಡೆ ರದ್ದಾಯಿತು ಎಂದರೆ ಪ್ರಯಾಣಿಕರಿಗೆ ಅನನುಕೂಲವಾಗದಂತೆ ಆ ನಿಲ್ದಾಣದಲ್ಲಿ ಮತ್ತೊಂದು ರೈಲು ನಿಲುಗಡೆ ಇರುವಂತೆ ನೋಡಿಕೊಳ್ಳಲಾಗುವುದು’ ಎಂದು ಯಾದವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.